ಉಡುಪಿ, ಸೆ.27: ಅಜ್ಜರಕಾಡಿನಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಯ ಕಟ್ಟಡವನ್ನು ಜನರ ಸೇವೆಗೆ ಬಿಟ್ಟು ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಅ.1ರಿಂದ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ.

ಜಿಲ್ಲಾಸ್ಪತ್ರೆಯ ಕಟ್ಟಡಕ್ಕೆ ಬೇಕಾಗಿರುವ ಯಂತ್ರೋಪಕರಣ, ವೈದ್ಯರು ಹಾಗೂ ದಾದಿಯರನ್ನು ವ್ಯವಸ್ಥೆಗೊಳಿಸಿ ಸೆ.30ರೊಳಗೆ ಜನರ ಸೇವೆಗೆ ಬಿಟ್ಟು ಕೊಡಬೇಕೆಂದು ಸಂಘಟನೆ ಈಗಾಗಲೇ ಗಡುವು ನೀಡಿತ್ತು. ಇಲ್ಲದಿದ್ದರೆ ಅಕ್ಟೋಬರ್ ಒಂದರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಲಾಗಿತ್ತು. ಸೆ.30ರೊಳಗೆ ಆಸ್ಪತ್ರೆ ಕಾರ್ಯಚರಿಸುವ ಬಗ್ಗೆ ಯಾವುದೇ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಸಂಘಟನೆಯು ಸಭೆ ಕರೆದು ಆ ಸಭೆಯಲ್ಲಿ ಅ.1ರಿಂದ ಒಂದು ವಾರಗಳ ಕಾಲ ಅಹೋ ರಾತ್ರಿ ಹೋರಾಟ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.

ಒಂದು ವಾರದೊಳಗೆ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ಬರದೇ ಇದ್ದಲ್ಲಿ ಇದೇ ಹೋರಾಟವನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸುವ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಬೇರೆ ರೀತಿಯ ಹೋರಾಟ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕರವೇ ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor