Karkala | ವಿಶ್ವ ಹೃದಯ ದಿನ: ವಾಕಥಾನ್ ನಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗಿ
ಕಾರ್ಕಳ: ವಿಶ್ವ ಹೃದಯ ದಿನದ ಅಂಗವಾಗಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ ವತಿಯಿಂದ ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ, ರೋಟರ್ಯಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಹಾಗೂ ರೋಟರ್ಯಾಕ್ಟ್ ಕ್ಲಬ್ ಸರ್ಕಾರಿ ಪಾಲಿಟೆಕ್ನಿಕ್ ಸಹಯೋಗದಲ್ಲಿ ಹೃದಯದ ಆರೋಗ್ಯದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ವಾಕ್‌ಥಾನ್ ಆಯೋಜಿಸಲಾಯಿತು. 500ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯಕರ ಜೀವನಶೈಲಿಯ ಮಹತ್ವದ ಸಂದೇಶ ಸಾರಿದರು.
ಕಾರ್ಕಳದ ಅನಂತಶಯನ ವೃತ್ತದಿಂದ ಆರಂಭವಾದ ವಾಕ್‌ಥಾನ್‌ಗೆ ಶಾಸಕ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು. ವಾಕ್‌ಥಾನ್ ತಾಲೂಕು ಪಂಚಾಯಿತಿ ಮಾರ್ಗವಾಗಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯವರೆಗೆ ನಡೆಯಿತು.
ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ, ರೋಟರಿ ಮತ್ತು ರೋಟರ್ಯಾಕ್ಟ್ ಸದಸ್ಯರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡರು. ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಬೀದಿನಾಟಕವೂ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ನಂತರ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಕಾರ್ತಿಕ್ ರಾವ್ ಮಾತನಾಡಿ, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಹಾಗೂ ಉತ್ತಮ ನಿದ್ರೆ ಅತ್ಯಗತ್ಯ ಎಂದು ತಿಳಿಸಿದರು. “ನಮ್ಮ ಆರೋಗ್ಯ, ನಮ್ಮ ಹೊಣೆ” ಎಂಬ ಸಂದೇಶವನ್ನು ಅವರು ಒತ್ತಿ ಹೇಳಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ರೋಟೇರಿಯನ್ ಸುರೇಶ್ ನಾಯಕ್ ಮಾತನಾಡಿ, ಹೃದಯದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ವಾಕ್‌ಥಾನ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ವಾಕ್‌ಥಾನ್ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರಿಯೇಟಿವ್ ಪಿಯು ಕಾಲೇಜು ಗರಿಷ್ಠ ಭಾಗವಹಿಸುವಿಕೆ ಹಾಗೂ ಘೋಷವಾಕ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಎಂ.ಪಿ.ಎಂ. ಕಾಲೇಜು ಫಲಕ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸರ್ಕಾರಿ ಪಾಲಿಟೆಕ್ನಿಕ್ ಶಿಸ್ತುಬದ್ಧ ತಂಡ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಸರ್ಕಾರಿ ನರ್ಸಿಂಗ್ ಕಾಲೇಜು ಬೀದಿನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿತು.
ಕಾರ್ಯಕ್ರಮದಲ್ಲಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್, ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿಯ ಅಧ್ಯಕ್ಷ ರೋಟೇರಿಯನ್ ಮಂಜುನಾಥ್ ಹೆಗ್ಡೆ, ರೋಟರ್ಯಾಕ್ಟ್ ಕ್ಲಬ್‌ಗಳ ಅಧ್ಯಕ್ಷರಾದ ಸುಜನ್ ಮತ್ತು ಶ್ರೀನಿವಾಸ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಲಾದ ಈ ವಾಕ್‌ಥಾನ್ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಆರೋಗ್ಯಕರ ಜೀವನಶೈಲಿಯ ಮಹತ್ವದ ಸಂದೇಶ ಸಾರಿತು.