ಜೀವನದಲ್ಲಿ ನಿರಂತರ ಶ್ರಮ ಇದ್ದಾಗ ಯಶಸ್ಸು ಸಾಧ್ಯ: ಗೋಕುಲ್‌ದಾಸ್ ನಾಯಕ್
ಉಡುಪಿ, ಸೆ.27: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು. ಅವಕಾಶಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು. ಜೀವನದಲ್ಲಿ ಸ್ಪಷ್ಟ ಉದ್ದೇಶ, ನಿರಂತರ ಶ್ರಮ ಇದ್ದಾಗ ಯಶಸ್ಸು ಸಿಗಲು ಸಾಧ್ಯ ಎಂದು ದ.ಕ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಎಂ.ಗೋಕುಲ್‌ದಾಸ್ ನಾಯಕ್ ಹೇಳಿದ್ದಾರೆ.
ರಾಜಾಪುರ ಸಾರಸ್ವತ ಸಭಾ ಪರ್ಕಳ, ಶ್ರೀದುರ್ಗಾಪರಮೆಶ್ವರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಆರ್‌ಎಸ್‌ಬಿ ಸಂಘ ಮಣಿಪಾಲ ಇದರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಜೀವನ ಕೌಶಲ್ಯ ಬೆಳವಣಿಕೆ- ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಮುಂದೇನು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಾಘವೇಂದ್ರ ಪ್ರಭು ಕರ್ವಾಲು ಸಂಸ್ಥೆಗಳಿಂದ ಮತ್ತು ಸರಕಾರದಿಂದ ಸಿಗುವ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿ, ನಮ್ಮ ಮಕ್ಕಳನ್ನು ಬೇರೆಯವರ ಮಕ್ಕಳ ಜೊತೆ ತುಲನೆ ಮಾಡುವುದನ್ನು ಬಿಡಬೇಕು ಎಂದರು. ಧನ್ವಂತರಿ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಉದಯಕುಮಾರ್ ಎಸ್‌ಎಸ್‌ಎಲ್‌ಸಿ ಪಿಯುಸಿ ನಂತರ ಇರುವ ವಿವಿಧ ರೀತಿಯ ಶಿಕ್ಷಣದ ಅವಕಾಶ ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ರಾಜಾಪುರ ಸಾರಸ್ವತ ಸಭಾ ಅಧ್ಯಕ್ಷ ಪಾಂಡುರಂಗ ಕಾಮತ್ ಎಳ್ಳಾರೆ ವಹಿಸಿದ್ದರು. ಶ್ರೀದುರ್ಗಾಪರಮೆಶ್ವರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನರಸಿಂಹ ನಾಯಕ್ ಶುಭ ಹಾರೈಸಿದರು. ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಉಪೇಂದ್ರ ನಾಯಕ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಸುರೇಂದ್ರ ನಾಯಕ್ ವಂದಿಸಿದರು. ದೀಪಕ್ ಕಾರ್ಯಕ್ರಮ ನಿರೂಪಿಸಿದರು.