ಶ್ರೀಮಂತ -ಬಡವರ ನಡುವಿನ ಕಂದಕ ದೂರ ಮಾಡುವುದು ಅಗತ್ಯ: ಡಾ.ಮೋಹನ್ ಆಳ್ವ
ಉಡುಪಿ, ಸೆ.27: ಪರ್ಯಾಯ ಶಿರೂರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ಉಡುಪಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ವತಿಯಿಂದ ವಿನಮ್ರ ಸಹಾಯಧನ ವಿತರಣಾ ಸಮಾರಂಭವು ರವಿವಾರ ಉಡುಪಿ ರಾಜಾಂಗಣದಲ್ಲಿ ನಡೆಯಿತು.
ಮೂಡಬಿದ್ರೆ ಆಳ್ವಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ, ಈ ದೇಶದಲ್ಲಿ ಕೋಟ್ಯಂತ ಆಸ್ತಿ ಹೊಂದಿದ ಆಗಾಧ ಶ್ರೀಮಂತರೂ ಇದ್ದಾರೆ. ಅದೇ ರೀತಿ ಒಂದು ಹೊತ್ತು ಊಟ ಮಾಡಲು ಸಾಧ್ಯವಾಗದ ಬಡವರು ಕೂಡ ಇದ್ದಾರೆ. ಅದೇ ರೀತಿ ವಿದ್ಯಾವಂತರೂ ಮತ್ತು ಅನಕ್ಷಕರಸ್ಥರು ಕೂಡ ಇದ್ದಾರೆ. ಶ್ರೀಮಂತ ಮತ್ತು ಬಡವ ಹಾಗೂ ವಿದ್ಯಾವಂತ ಮತ್ತು ಅನಕ್ಷರಸ್ಥರ ನಡುವಿನ ಕಂದಕವನ್ನು ದೂರ ಮಾಡಬೇಕಾಗಿರುವುದು ನಮ್ಮೆಲವ್ಲರ ಕರ್ತವ್ಯವಾಗಿದೆ. ಆದರೆ ನಮ್ಮ ಆಡಳಿತ ವ್ಯವಸ್ಥೆಗಳಿಗೆ ಇನ್ನೂ ಈ ಕಂದಕವನ್ನು ದೂರ ಮಾಡಲು ಸಾಧ್ಯವಾಗದೇ ಇರುವುದು ದುರಂತ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕಲಾರಂಗದ ಈ ಸೇವೆಯಿಂದ ದೇಶದ ಶಿಕ್ಷಣದಲ್ಲಿ ಗುಣಮಟ್ಟ ತರಲು ಸಾಧ್ಯವಾಗಿದೆ. ಈ ಮೂಲಕ ಹೊಸ ನಾಡನ್ನು ಕಟ್ಟುತ್ತಿದ್ದಾರೆ. ನಮ್ಮಲ್ಲಿನ ಯುವ ಶಕ್ತಿ ರಾಷ್ಟ್ರಶಕ್ತಿಯಾಗಿದೆ. ಅವರನ್ನು ದೇಶದ ಸಂಪನ್ಮೂಲವನ್ನಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಪರ್ಯಾಯ ಶಿರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಉದ್ಘಾಟಿಸಿ ದರು. ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಪಿ.ನಾರಾಯಣ, ಗೋವಾ ಓಎನ್‌ಜಿಸಿ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್, ವೈದ್ಯ ಡಾ.ಜೆ.ಎನ್.ಭಟ್, ಹುಬ್ಬಳ್ಳಿಯ ಮೈಲೈಫ್ ಸಂಸ್ಥಾಪಕ ಪ್ರವೀಣ್ ಎಂ.ಗುಡಿ, ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು.
ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.