ಆಸಿಫ್ ಕೋಟೇಶ್ವರ 

ಉಡುಪಿ, ಸೆ.27: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ, ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ವ್ಯಕ್ತಿಯೇ ಈ ಕುರಿತು ಪೊಲೀಸರಿಗೆ ದೂರು ನೀಡಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವ ಅಗತ್ಯವನ್ನು ಉಂಟುಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.

ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಪ್ರಕಾರ, ಉಡುಪಿ ಮೂಲದ ಸುದೀಪ್ ಎಂಬಾತನು ದೂರುದಾರರನ್ನು ಉಡುಪಿಯ ತ್ರಿವೇಣಿ ಸರ್ಕಲ್ ಬಳಿಯ ಹೋಟೆಲ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಮಹೇಶ್ ಎಂಬಾತನನ್ನು ಪರಿಚಯಿಸಿದ್ದಾನೆ ಎನ್ನಲಾಗಿದೆ. ಬಳಿಕ ಅಲ್ಲಿ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವ ಕುರಿತು ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಯಲ್ಲಿ ಕೇವಲ ಸುದೀಪ್, ಮಹೇಶ್ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಸೀಮಿತ ಗೊಳಿಸದೆ, ಸಂಚಿನ ಹಿಂದೆ ಇರುವ ಸಂಪೂರ್ಣ ಜಾಲ, ಪ್ರೇರಕರು, ಹಣಕಾಸು ನೆರವು ನೀಡಿದವರು, ಸಂಪರ್ಕ ಹೊಂದಿರುವ ವರು ಹಾಗೂ ಇತರ ಸಹಭಾಗಿಗಳ ಪಾತ್ರವನ್ನು ತನಿಖೆಯ ಮೂಲಕ ಬಯಲಿಗೆಳೆಯಬೇಕು ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಆಗ್ರಹಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಪ್ಪಿತಸ್ಥರನ್ನು ತಡಮಾಡದೆ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಈ ಪ್ರಕರಣದಲ್ಲಿ ಸುಮಾರು 24 ಲಕ್ಷ ರೂ.ನಷ್ಟು ದೊಡ್ಡ ಮೊತ್ತವನ್ನು ಕೊಲೆ ನಡೆಸಲು ಮುಂದಾದವರಿಗೆ ನೀಡಲು ಸಿದ್ಧಪಡಿಸಲಾಗಿತ್ತು ಎಂಬ ಆರೋಪವೂ ಗಂಭೀರವಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರದ ಹಿಂದೆ ಪ್ರಭಾವಿ ವ್ಯಕ್ತಿಗಳು ಅಥವಾ ಸಂಘಟಿತ ಜಾಲದ ಕೈವಾಡ ವಿದೆಯೇ ಎಂಬುದನ್ನು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಇದು ವೈಯಕ್ತಿಕ ದ್ವೇಷದ ಹಿನ್ನೆಲೆ ಯಲ್ಲಿ ನಡೆದ ಸಂಚೇ ಅಥವಾ ಇದರ ಹಿಂದೆ ಯಾವುದಾದರೂ ಸಂಘಟನೆ ಕಾರ್ಯನಿರ್ವ ಹಿಸುತ್ತಿದೆಯೇ ಎಂಬುದನ್ನೂ ತನಿಖೆಯಿಂದ ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ಇಂತಹ ಘಟನೆಗಳು ಸಮಾಜದಲ್ಲಿ ಭಯ ಮತ್ತು ಗೊಂದಲಕ್ಕೆ ಕಾರಣವಾಗುವುದಲ್ಲದೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾ ಗದೆ ನಿಷ್ಪಕ್ಷಪಾತವಾಗಿ ನಡೆಸಿ, ಸಂಚಿನ ನೈಜ ಹಿನ್ನೆಲೆ ಹಾಗೂ ಇದರ ಹಿಂದಿರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯಬೇಕು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor