ಉಡುಪಿ: 1274 ಮಂದಿಗೆ 1,75,89,500 ರೂ. ವಿದ್ಯಾರ್ಥಿವೇತನ ವಿತರಣೆ
ಉಡುಪಿ, ಸೆ.27: ಯಕ್ಷಗಾನ ಕಲಾರಂಗ ಉಡುಪಿ ಇದರ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಈ ಬಾರಿ 1274 ವಿದ್ಯಾರ್ಥಿಗಳಿಗೆ 1,75,89,500ರೂ. ವಿದ್ಯಾರ್ಥಿವೇತನ ವನ್ನು ರವಿವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣ ದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.
ಪರ್ಯಾಯ ಶೀರೂರು ಮಠಾಧೀಶ ಶ್ರೀವೇದವರ್ಧನತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶದಲ್ಲಿ ‘ವಿದ್ಯಾದಾನ ಕ್ಕಿಂತಲೂ ಮಿಗಿಲಾದ ದಾನಲ್ಲ’ ’ನೀರಿದ್ದರೆ ನದಿ’, ’ಜ್ಞಾನ ಇದ್ದರೆ ಮನುಷ್ಯ’, ’ಪರೋಪಕಾರಕ್ಕಿಂತ ಮಿಗಿಲಾದ ಪುಣ್ಯಲ್ಲ. ಯಕ್ಷಗಾನ ಕಲಾರಂಗವೂ ಮಧ್ವಾಚಾರ್ಯರು ಹೇಳಿದ ’ನಾನಾ ಜನರ ಸೇವೆಯೆ ಭಗವಂತನಿಗೆ ನಾವು ಕೊಡುವ ತೆರಿಗೆ’ ಎಂಬ ಮಾತನ್ನು ಅನುಷ್ಠಾನಕ್ಕೆ ತಂದ ಸಂಸ್ಥೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗೀತಾನಂದ ಫೌಂಡೇಶನ್‌ನ ಅಧ್ಯಕ್ಷ ಆನಂದ ಸಿ. ಕುಂದರ್ ಮಾತನಾಡಿ, ಸಮಾಜಪರ ಕೆಲಸ ವನ್ನು ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ಹಣದ ಕೊರತೆಯಾಗುವುದಿಲ್ಲ ಎಂಬುವುದಕ್ಕೆ ಯಕ್ಷಗಾನ ಕಲಾರಂಗ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 25 ವಿದ್ಯಾರ್ಥಿಗಳಿಗೆ ಚೆಕ್ ಮತ್ತು 15 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ವಿತರಿಸಲಾಯಿತು. ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ’ ಕಲಾಂತರಂಗ- 2025-2026’ನ್ನು ಬಿಡುಗಡೆ ಗೊಳಿಸಲಾಯಿತು. ಕರ್ಣಾಟಕ ಬ್ಯಾಂಕಿನ ಜಿ.ಎಂ. ಬಿ.ಜಿ. ಸಾಮಗ ಶುಭಾಶಂಸನೆಯ ಮಾತುಗಳನ್ನಾಡಿದರು.
ಇನ್‌ಫೋಸಿಸ್ ಮಂಗಳೂರಿನ ’ಪ್ರೇರಣ’ದ ವಿಶ್ವಸ್ಥ ರವಿರಾಜ ಬೆಳ್ಮ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಶ್ಚಂದ, ಬೆಂಗಳೂರಿನ ಇಂಜಿನೀಯರ್ ಪಾರಂಪಳ್ಳಿ ನಟರಾಜ ಉಪಾಧ್ಯ, ಸಿಎ ಗಣೇಶ್ ಕಾಂಚನ್, ಪಣಂಬೂರು ವಾಸುದೇವ ಐತಾಳ್, ಉದ್ಯಮಿ ಉದಯ ಹೆಗ್ಡೆೆ ಮಾತನಾಡಿದರು. ಈ ಸಂದರ್ಭದಲ್ಲಿ 10 ವಿದ್ಯಾರ್ಥಿಗಳಿಗೆ 5ಲಕ್ಷ ರೂ. ವೆಚ್ಚದಲ್ಲಿ ವ್ಯಾಪ್‌ಟಾಪ್ ವಿತರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಪಿ.ಪುರುಷೋತ್ತಮ ಶೆಟ್ಟಿ, ತೆಕ್ಕಟ್ಟೆ ಸಿದ್ಧಿ ವಿನಾಯಕ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಅರುಣ್ ಕುಮರ್ ಶೆಟ್ಟಿ, ಭವಾನಿ ಎಂಟರ್‌ಪ್ರೈಸಸ್‌ನ ಮಾಲಕ ಪುರುಷೋತ್ತಮ ಪಟೇಲ್, ದಾನಿ ಯು.ವಿಶ್ವನಾಥ ಶೆಣೈ, ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಹಿರಿಯ ಕಾರ್ಯಕರ್ತ ಯು.ಎಸ್.ರಾಜಗೋಪಾಲ ಆಚಾರ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಸದಸ್ಯರುಗಳಾದ ಭುವನಪ್ರಸಾದ ಹೆಗ್ಡೆ, ಜಯ ಕುಮಾರ್ ಮುದ್ರಾಡಿ ಸಹಕರಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತು ಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.