×
Ad

ಫೆ.10 - 11: ಉಡುಪಿ ವಕೀಲರ ಸಂಘದಿಂದ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ

Update: 2024-02-07 20:25 IST

ಉಡುಪಿ: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ವಕೀಲರ ಸಂಘಗಳ ಸದಸ್ಯರಿಗಾಗಿ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಕಲಾ ಸಂಭ್ರಮ’ ಫೆ.10 ಮತ್ತು 11ರಂದು ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿರ್ಮಿಸಲಾದ ತೆರೆದ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲ ಸಮುದಾಯದಲ್ಲಿ ಹೊಸ ಚೈತನ್ಯ, ಉತ್ಸಾಹ, ಹುರುಪು ತುಂಬಿ ಅವರಲ್ಲಿರುವ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ, ವೇದಿಕೆ ಒದಗಿಸುವ ಉದ್ದೇಶದೊಂದಿಗೆ ರಾಜ್ಯಮಟ್ಟದ ವಕೀಲರ ಪ್ರತಿಭಾ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ ಎಂದರು.

ಕಲಾ ಸಂಭ್ರಮವನ್ನು ಫೆ.10ರಂದು ಬೆಳಗ್ಗೆ 10ಗಂಟೆಗೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗಳಾದ ಪಿ.ಎಸ್.ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ ಮೊಹಮ್ಮದ್ ನವಾಝ್ ಅಧ್ಯಕ್ಷತೆ ವಹಿಸಲಿದ್ದಾರೆ. ಮತ್ತೊಬ್ಬ ನ್ಯಾಯಮೂರ್ತಿ ಸಿ.ಎಂ.ಜೋಷಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರು ವರು ಎಂದರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಗೌರವ ಅತಿಥಿಗಳಾಗಿ ಭಾಗವಹಿಸಿದರೆ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದ ರೆನೋಲ್ಡ್ ಪ್ರವೀಣ್‌ಕುಮಾರ್, ಅಂದು ಸಂಜೆ 5ಗಂಟೆಗೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಕಲಾ ಸಂಭ್ರಮದಲ್ಲಿ ರಾಜ್ಯದ ವಿವಿಧ ವಕೀಲರ ಸಂಘಗಳ 20 ತಂಡಗಳು ಸ್ಪರ್ಧಿಸಲಿವೆ. ಸ್ಪರ್ಧೆಯಲ್ಲಿ ಸಮಗ್ರ ತಂಡ ಪ್ರಶಸ್ತಿ ವಿಜೇತ ತಂಡಕ್ಕೆ 33,333ರೂ ನಗದು ಮತ್ತು ಶಾಶ್ವತ ಫಲಕ, ರನ್ನರ್ ಅಪ್ ತಂಡಕ್ಕೆ 22,222 ರೂ.ನಗದು ಮತ್ತು ಫಲಕ, ತೃತೀಯ ಸಮಗ್ರ ತಂಡಕ್ಕೆ 11,111ರೂ. ನಗದು ಮತ್ತು ಫಲಕ ನೀಡಿ ಗೌರವಿಸಲಾಗುವುದು ಎಂದರು.

ಇದರೊಂದಿಗೆ ಅತ್ಯುತ್ತಮ ಕಾರ್ಯಕ್ರಮ ನಿರೂಪಕ, ಅತ್ಯುತ್ತಮ ಸಮೂಹ ನೃತ್ಯ, ಅತ್ಯುತ್ತಮ ಸಮೂಹ ಗಾಯನ, ಅತ್ಯುತ್ತಮ ವಿಶೇಷ ಪ್ರತಿಭೆ, ಅತ್ಯುತ್ತಮ ಶಿಸ್ತುಬದ್ಧ ತಂಡ ಪ್ರದರ್ಶನ ಹಾಗೂ ಅತ್ಯುತ್ತಮ ಸೃಜನಶೀಲ ಪ್ರದರ್ಶನಗಳಿಗೆ ಪ್ರತ್ಯೇಕ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಸಮಾರೋಪ ಸಮಾರಂಭ ಫೆ.11ರ ಸಂಜೆ 6:30ಕ್ಕೆ ನಡೆಯಲಿದ್ದು, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾ ಗಿರುವ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡುವರು. ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸುವರು. ರಾಜ್ಯ ವಕೀಲರದ ಪರಿಷತ್‌ನ ಸದಸ್ಯರಾಗಿರುವ ಹರೀಶ್ ಎಸ್.ಮುಖ್ಯ ಅತಿಥಿಗಳಾಗಿರುವರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಖಜಾಂಚಿ ಗಂಗಾಧರ ಎಚ್.ಎಂ., ಆನಂದ ಮಡಿವಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News