×
Ad

12 ಅಂಗಡಿಗಳ ಪರವಾನಿಗೆ ರದ್ದು: ಉಡುಪಿ ಡಿಸಿ ಡಾ.ವಿದ್ಯಾಕುಮಾರಿ

Update: 2025-05-15 19:52 IST

ಉಡುಪಿ, ಮೇ 15: ಜಿಲ್ಲೆಯ ಶಾಲಾ ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಈಗಾಗಲೇ ಮಣಿಪಾಲದ 11, ಬೈಂದೂರಿನ ತಾಲೂಕಿನ ಒಂದು ಕಡೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಲೈಸೆನ್ಸ್‌ಗಳನ್ನು ರದ್ದುಪಡಿಸಲಾಗಿದೆ. ಬಾಕಿ ಉಳಿದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೋಟ್ಪಾ-2003 ಕಾಯಿದೆಯ ಕುರಿತ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕೋಟ್ಪಾ ಕಾಯಿದೆ ಅನ್ವಯ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಸಹ ಜಿಲ್ಲೆಯ 38 ಶಾಲಾ-ಕಾಲೇಜುಗಳ ನಿಷೇಧಿತ ವ್ಯಾಪ್ತಿಯಲ್ಲಿಯೇ ಇವುಗಳ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳೂ ಕೇಳಿ ಬಂದಿವೆ. ಈ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ, ಮುಂಗಟ್ಟುಗಳ ಪರವಾನಿಗೆ ರದ್ದು ಪಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದರು.

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ಪ್ರತ್ಯೇಕ ಪರವಾನಿಗೆಯನ್ನು ಹೊಂದಿರ ಬೇಕು. ತಂಬಾಕಿನಂತಹ ಉತ್ಪನ್ನಗಳ ಬಳಕೆಯು ಮಕ್ಕಳ ಜೀವನವನ್ನೇ ಹಾಳುಮಾಡುವುದರಿಂದ ಇವುಗಳ ಬಳಸದಂತೆ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮ ಗಳನ್ನು ಏರ್ಪಡಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ 2025ರ ಏಪ್ರಿಲ್ ತಿಂಗಳಲ್ಲಿ 5ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, ಸೆಕ್ಷನ್ 4, ಸೆಕ್ಷನ್ 6(ಎ), 6(ಬಿ) ಅಡಿಯಲ್ಲಿ 71ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿಕೊಂಡು 11,400 ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿ ಸಿದ 11 ಪ್ರಕರಣಗಳಿಂದ 1100 ರೂ. ದಂಡ ವಸೂಲಿ ಮಾಡಲಾಗಿದೆ. ದಾಳಿಗಳನ್ನು ನಿರಂತರವಾಗಿ ನಡೆಸಬೇಕು ಎಂದು ಅವರು ಅಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಎ.ಎಸ್.ಪಿ ಪಿ.ಎ. ಹೆಗಡೆ, ಡಿಎಫ್‌ಓ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

3 ವಸತಿ ಸಮುಚ್ಚಯಗಳು ತಂಬಾಕು ಮುಕ್ತ!

ಜಿಲ್ಲೆಯಲ್ಲಿ ಈಗಾಗಲೆ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಉಳಿದ ಗ್ರಾಮಗಳಲ್ಲಿಯೂ ಸಹ ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಸ್ಥಳೀಯ ಸಂಸ್ಥೆಗಳು, ಗ್ರಾಪಂ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.

ಜಿಲ್ಲೆಯ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚು ಮನೆಗಳಿದ್ದು, ಅವುಗಳನ್ನು ತಂಬಾಕು ಮುಕ್ತ ಅಪಾರ್ಟ್‌ಮೆಂಟ್‌ ಗಳೆಂದು ಘೋಷಿಸಲಾಗುತ್ತಿದೆ. ಈಗಾಗಲೇ ಉಡುಪಿ ತಾಲೂಕಿನ ಕ್ಲಾಸಿಕಲ್ ನೆಸ್ಟ್, ಕಾರ್ಕಳದ ಪಂಚಮಿ ರೆಸಿಡೆನ್ಸಿ ಮತ್ತು ಗಂಗಾ ಪ್ಯಾರಡೈಸ್‌ಗಳನ್ನು ತಂಬಾಕು ಮುಕ್ತ ಅಪಾರ್ಟ್ ಮೆಂಟ್‌ಗಳೆಂದು ಘೋಷಿಸಿ, ಪ್ರಮಾಣಪತ್ರ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News