×
Ad

ಜು.13: ಶೀರೂರು ಪರ್ಯಾಯದ ಕಟ್ಟಿಗೆ ಮುಹೂರ್ತ

Update: 2025-07-11 21:39 IST

ಉಡುಪಿ, ಜು.11: 2026ರ ಜ.18ರ ಮುಂಜಾನೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಮೂರನೇಯದಾದ ಕಟ್ಟಿಗೆ ಮುಹೂರ್ತ ಜು.13ರ ರವಿವಾರ ಮುಂಜಾನೆ 9:15ಕ್ಕೆ ನಡೆಯಲಿದೆ ಎಂದು ಮಠದ ದಿವಾಣರಾದ ಡಾ.ಉದಯ ಸರಳತ್ತಾಯ ತಿಳಿಸಿದ್ದಾರೆ.

ಶಾಸಕ ಯಶಪಾಲ್ ಸುವರ್ಣರ ಉಪಸ್ಥಿತಿಯಲ್ಲಿ ರಥಬೀದಿಯ ಶೀರೂರು ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ (2026-28) ಅನ್ನದಾನಕ್ಕಾಗಿ ಕಟ್ಟಿಗೆ ಸಂಗ್ರಹಿಸುವ ದಿಸೆಯಲ್ಲಿ ಕಟ್ಟಿಗೆ ಮುಹೂರ್ತ ನಡೆಯುವುದು ಸಂಪ್ರದಾಯವಾಗಿದೆ ಎಂದರು.

ಇದಕ್ಕಾಗಿ ಸುಮಾರು 25 ಲಾರಿಯಷ್ಟು ಕರಿಮರದ (ಕರ್ಮಾರು) ಕಟ್ಟಿಗೆಯನ್ನು ಸಂಗ್ರಹಿಸಿ ಅದನ್ನು ಮಧ್ವ ಸರೋವರದ ಈಶಾನ್ಯ ಮೂಲೆಯಲ್ಲಿ ಸುಮಾರು 50 ಅಡಿ ಎತ್ತರ ಹಾಗೂ 25 ಅಡಿ ಅಗಲದ ಕಲಾತ್ಮಕ ವಾದ ರಥದ ಮಾದರಿಯಲ್ಲಿ ಪೇರಿಸಿ ಇಡಲಾಗುತ್ತದೆ. ಡಿಸೆಂಬರ್ ವೇಳೆಗೆ ಇದನ್ನು ಸಿದ್ಧಪಡಿಸಿ ತುದಿ ಯಲ್ಲಿ ಶಿಖರ, ಪತಾಕೆಯನ್ನಿರಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಕಟ್ಟಿಗೆ ಮುಹೂರ್ತದ ವಿಧಿವಿಧಾನಗಳು ಜು.13ರಂದು ರವಿವಾರ ಮುಂಜಾನೆ 7:30ಕ್ಕೆ ಪ್ರಾರಂಭ ಗೊಳ್ಳಲಿದ್ದು ಮಠದ ಪರಿಚಾರಕರು, ಭಕ್ತರು ಕಲ್ಸಂಕ ಸಮೀಪದ ಲಕ್ಷ್ಮೀತೋಟಕ್ಕೆ ತೆರಳಿ ಅಲ್ಲಿಂದ ಕಟ್ಟಿಗೆಯನ್ನು ಹೊತ್ತು ಮೆರವಣಿಗೆಯಲ್ಲಿ ತರಲಾಗುತ್ತದೆ. ಶ್ರೀಕೃಷ್ಣ, ಮುಖ್ಯಪ್ರಾಣ ಸೇರಿದಂತೆ ವಿವಿಧ ದೇವರಿಗೆ ನಮಿಸಿ, ವಾದಿರಾಜರು ಹಾಕಿಕೊಟ್ಟ ಸಂಪ್ರದಾಯದಂತೆ ಕಟ್ಟಿಗೆ ರಥದ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ. ಇದಕೆಕ ಸುಮಾರು 20 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಡಾ.ಸರಳತ್ತಾಯ ಹೇಳಿದರು.

ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಈ ಬಾರಿಯ ಶೀರೂರು ಪರ್ಯಾಯವನ್ನು ಭಕ್ತರ ಪರ್ಯಾಯ ವಾಗಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಉಡುಪಿ ನಗರಸಭೆ ಪರ್ಯಾಯ ಸಂದರ್ಭದಲ್ಲಿ 2026ರ ಜ.14ರಿಂದ 24ರವರೆಗೆ 10ದಿನಗಳ ಕಾಲ ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ ಉಡುಪಿ ನಗರವನ್ನು ದೀಪಾಂಲಕಾರದಿಂದ ಸಜ್ಜುಗೊಳಿಸಲಿದೆ ಎಂದರು.

ಈ ಬಾರಿಯ ಪರ್ಯಾಯಕ್ಕಾಗಿ ಉಡುಪಿ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ವಿಶೇಷ ಅನುದಾನಕ್ಕೆ ಮನವಿ ಮಾಡಲಾಗಿದೆ. ಪರ್ಯಾಯ ಸ್ವಾಗತ ಸಮಿತಿ ಕಚೇರಿ ಜು.13ರಂದು ಉದ್ಘಾಟನೆಗೊಳ್ಳಲಿದೆ. ಈ ಬಾರಿಯ ಪುರಮೆರವಣಿಗೆ ಜ.9ರಂದು ಕಡಿಯಾಳಿಯಿಂದ ಪ್ರಾರಂಭಗೊಳ್ಳಲಿದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶೀರೂರು ಮಠದ ಮೋಹನ್ ಭಟ್, ನಂದನ್ ಜೈನ್ ಹಾಗೂ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News