ಸೆ.13: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ
ಉಡುಪಿ, ಸೆ.11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ ತ್ರೋಬಾಲ್, ಅಥ್ಲೆಟಿಕ್ಸ್, ಟೇಬಲ್‌ಟೆನಿಸ್, ವುಶು ಹಾಗೂ ಲಾನ್‌ಟೆನಿಸ್ ಸ್ಪರ್ಧೆಗಳು ಸೆ.13 ಮತ್ತು 14ರಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟವನ್ನು ಸೆ.13ರಂದು ಸಂಜೆ 4:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ,ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಇತರರು ಭಾಗವಹಿಸಲಿದ್ದಾರೆ.
ಕ್ರೀಡಾಪಟುಗಳಿಗೆ ಸೂಚನೆ: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಫುಟ್‌ಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಹ್ಯಾಂಡ್‌ಬಾಲ್ ಮತ್ತು ಈಜು ಸ್ಪರ್ಧೆಗಳು ಸೆ.13 ಮತ್ತು 14ರಂದು ಹಾಸನದ ಜಿಲ್ಲಾ ಕ್ರೀಡಾಂಗಣ ದಲ್ಲಿ ಹಾಗೂ ಹಾಕಿ, ಯೋಗ ಮತ್ತು ಜಿಮ್ನಾಸ್ಟಿಕ್ಸ್ (ಆಯ್ಕೆ) ಸ್ಪರ್ಧೆಗಳು ಸೆ.15ರಂದು ಕೊಡಗು ಜಿಲ್ಲೆ ಕೂಡಿಗೆ ಕ್ರೀಡಾಶಾಲೆಯಲ್ಲಿ ನಡೆಯಲಿವೆ.
ಇದರಲ್ಲಿ ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾಪಟುಗಳು ಆನ್‌ಲೈನ್ ಮೂಲಕ ನೋಂದಾವಣೆ ಮಾಡಿದ ಗುರುತಿನ ಚೀಟಿ ಹಾಗೂ ಇತರ ದಾಖಲೆಗಳೊಂದಿಗೆ ನಿಗದಿತ ದಿನದಂದು ಸಂಘಟಕರಲ್ಲಿ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.