×
Ad

ಜು.14: ಜಿಲ್ಲೆಯ ಕೊರಗರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

Update: 2025-07-11 20:17 IST

ಉಡುಪಿ, ಜು.11: ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಅಭಿವೃದ್ಧಿಗಾಗಿ ಮಂಜೂರಾದ ಅನುದಾನ ವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೊರಗ ಸಂಘದ ಆಶ್ರಯದಲ್ಲಿ ಇದೇ ಜು.14ರ ಸೋಮವಾರ ಬೆಳಗ್ಗೆ 10 ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಬೇಡಿಕೆಗಳು: 2021-2022ನೇ ಸಾಲಿನಲ್ಲಿ ಕೊರಗ ಸಮುದಾಯದ ಅಭಿವೃದ್ಧಿಗಾಗಿ ಹಂಚಿಕೆಯಾದ ಪಿವಿಟಿಜಿ ಯೋಜನೆಯ 3.20 ಕೋಟಿ ರೂ.ಗಳಲ್ಲಿ 1.60 ಕೋಟಿ ರೂ. ಮಾತ್ರ ಈವರೆಗೆ ಬಿಡುಗಡೆಗೊಂಡಿದೆ. ಬಾಕಿ ಉಳಿದ 1.60 ಕೋಟಿ ರೂ.ಇಂದಿನವರೆಗೂ ಬಿಡುಗಡೆಗೊಂಡಿಲ್ಲ. ಈ ಯೋಜನೆಯ ಹಣವು ಕೊರಗರ ಶಿಕ್ಷಣ, ಕುಡಿಯುವ ನೀರು, ಸ್ವ-ಉದ್ಯೋಗ, ಸ್ನಾನಗೃಹ ಹಾಗೂ ಜಮೀನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾವುದಂಥದ್ದು. ಆದುದರಿಂದ ಸರಕಾರ ಬಾಕಿ ಉಳಿದ ಅನುದಾನದ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಸಂಘದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

2021-2022ರಿಂದ ಪಿವಿಟಿಜಿ ಯೋಜನೆಯ ಅನುದಾನ ಹೊತು ಪಡಿಸಿ ಬೇರೆ ಯಾವುದೇ ಅನುದಾನವೂ ಕೊರಗರಿಗೆ ಮಂಜೂರಾಗಿಲ್ಲ. ಇದರಿಂದ ಕರಾವಳಿ ಮೂಲನಿವಾಸಿಗಳೂ, ತೀರಾ ಹಿಂದುಳಿದ ಸಮುದಾಯ ವಾದ ಕೊರಗರ ಅಭಿವೃದ್ಧಿ ಕುಂಠಿತಗೊಳ್ಳುವಂತಾಗಿದೆ. ಕೊರಗರಿಗೆ ಪಿವಿಟಿಜಿ ವಿಶೇಷ ಅನುದಾನವನ್ನು ಪ್ರತಿವರ್ಷವೂ ನೀಡಬೇಕು ಎಂದು ಹೇಳಿಕೆ ಒತ್ತಾಯಿಸಿದೆ.

ಈ ಸಲದ ಬಜೆಟ್‌ನಲ್ಲಿ ಆದಿವಾಸಿಗಳ ಅಭಿವೃದ್ಧಿಗೆ ಪ್ರಸ್ತಾಪಿಸಿರುವ 200 ಕೋಟಿ ರೂ. ಅನುದಾನದಲ್ಲಿ ಉಡುಪಿ ಜಿಲ್ಲೆಯ ಕೊರಗರಿಗೆ ಕನಿಷ್ಠ 25 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕು ಎಂದೂ ಆಗ್ರಹಿಸಲಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂಲನಿವಾಸಿ ಬುಡಕಟ್ಟು ಸಮುದಾಯದವರಾದ ಕೊರಗರು ಈಗಲೂ ಅಸ್ಪಶ್ಯ ಸಮುದಾಯ ವಾಗಿಯೇ ಮುಂದುವರಿದಿದ್ದಾರೆ. ವಿವಿಧ ಸಾಮಾಜಿಕ ಕಾರಣಗಳಿಗಾಗಿ ಸಮುದಾಯದ ಜನಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿದೆ. ಉಭಯ ಜಿಲ್ಲೆಗಳಲ್ಲಿ ಕೊರಗ ಇಂದಿನ ಜನಸಂಖ್ಯೆ 12,000 ಗಡಿ ದಾಟುವುದಿಲ್ಲ ಸಂಘದ ಅಧ್ಯಕ್ಷರು ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ.

ಕೊರಗರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಅನೇಕ ಯೋಜನೆಗಳಿದ್ದರೂ, ಅವು ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ಇರುವುದರಿಂದ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಇನ್ನೂ ಹಿಂದುಳಿದಿದೆ. ರಾಜ್ಯದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇದ್ದರೂ ಅನುದಾನ ಸರಿಯಾಗಿ ಸಿಗುತ್ತಿಲ್ಲ. ಆದುದರಿಂದ ನಾವು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗೆ ಬಂದು ಪ್ರತಿಭಟಿಸುತಿದ್ದೇವೆ. ಶತಶತಮಾನಗಳಿಗೆ ಶೋಷಿತ ಸಮುದಾಯದ ಬದುಕು ಸರಕಾರದ ಆರ್ಥಿಕ ಬೆಂಬಲವಿಲ್ಲದಿದ್ದರೆ ಹೆಚ್ಚಿನ ದುರಂತಕ್ಕೆ ಒಳಗಾಗುತ್ತದೆ. ಆದ್ದರಿಂದ ಸರಕಾರ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News