ಸೆ.14ರಂದು ಮಲ್ಪೆ ಬೀಚ್‌ನಲ್ಲಿ ‘ಉಡುಪಿದ ಪಿಲಿನಲಿಕೆ’
ಉಡುಪಿ, ಸೆ.13: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಉಡುಪಿದ ಪಿಲಿನಲಿಕೆ-2025’ ಹುಲಿವೇಷದ ಅದ್ಧೂರಿ ಪ್ರದರ್ಶನ ಮಲ್ಪೆ ಕಡಲು ಕಿನಾರೆಯಲ್ಲಿ ನಾಡೋಜ ಡಾ.ಜಿ.ಶಂಕರ್ ವೇದಿಕೆಯಲ್ಲಿ ಸೆ.14ರಂದು ಸಂಜೆ ನಡೆಯಲಿದೆ ಎಂದು ಸ್ಪರ್ಧೆಯ ಸಂಘಟಕರಾದ ಮಲ್ಪೆ ಕೊಳ ಫ್ರೆಂಡ್ಸ್‌ನ ವಿವೇಕ್ ಜಿ.ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರನೇ ವರ್ಷದ ‘ಉಡುಪಿದ ಪಿಲಿನಲಿಕೆ’ ಕಾರ್ಯಕ್ರಮವು ಉಡುಪಿಯ ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಯನ್ನು ವೈಭವೀಕರಿಸುವ ಉದ್ದೇಶ ಹೊಂದಿದೆ. ಸಾಂಪ್ರದಾಯಿಕ ಹುಲಿವೇಷದ ಈ ಪ್ರದರ್ಶನವು ಉಡುಪಿ ಶೈಲಿಯ ಬಣ್ಣ, ಜಟ್ಟಿ ಮತ್ತು ಟೊಪ್ಪಿಗೆಗೆ ವಿಶೇಷ ಆದ್ಯತೆ ನೀಡಲಿದೆ ಎಂದವರು ವಿವರಿಸಿದರು.
ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನ 1,00,000ರೂ., ದ್ವಿತೀಯ ಬಹುಮಾನ 50,000 ರೂ. ಇರಲಿದೆ. ಅಲ್ಲದೆ, ಉಡುಪಿ ಶೈಲಿಯ ಉತ್ತಮ ಬಣ್ಣ, ತಾಸೆ, ಮರಕಾಲು ಕುಣಿತ, ವೈಯಕ್ತಿಕ ಕುಣಿತ ಮತ್ತು ಮುಡಿ ಎಸೆತ ವಿಭಾಗಗಳಲ್ಲಿ ವಿಜೇತರಿಗೆತಲಾ 10,000ರೂ.ಗಳ ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶ್ವಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೆ.ರಘುಪತಿ ಭಟ್, ಉದ್ಯಮಿಗಳಾದ ಆನಂದ್ ಸಿ. ಕುಂದರ್, ಸಾಧು ಸಾಲಿಯಾನ್, ಕಿರಣ್ ಚಂದ್ರ ಪುಷ್ಪಗಿರಿ, ಶರತ್ ಕೆಜೆ, ಪ್ರಸಾದ್ ರಾಜ್ ಕಾಂಚನ್ ಅಲ್ಲದೇ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಪಾಂಡುರಂಗ ಮಲ್ಪೆ ಮತ್ತು ಇತರ ಗಣ್ಯರೊಂದಿಗೆ ತುಳು ಮತ್ತು ಕನ್ನಡ ಚಿತ್ರರಂಗದ ಕಲಾವಿದರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಜಕರಾದ ಗಣೇಶ್ ಸಾಲಿಯಾನ್, ಮಂಜುನಾಥ್ ಸಾಲಿಯಾನ್ ಕೊಳ, ಸಂತೋಷ್ ಕೊಳ, ಶೀತಲ್ ಉಪಸ್ಥಿತರಿದ್ದರು.