ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 14 ಕೋಟಿ ರೂ. ಭ್ರಷ್ಟಾಚಾರ ಹಗರಣ: ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ಜಾಥಾ; ತನಿಖೆಗೆ ಆಗ್ರಹ
ಬ್ರಹ್ಮಾವರ, ಅ.9: ಕರಾವಳಿ ಕರ್ನಾಟಕದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದು ಈಗ ಮುಚ್ಚಿರುವ ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುಜರಿ ವಸ್ತುಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ 14 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ಗಳ ನೇತೃತ್ವದಲ್ಲಿ ಸೋಮವಾರ ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಾಗೂ ಬಹಿರಂಗ ಸಭೆ ಜರಗಿತು.
ಹಾರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ದಲ್ಲೇ ಇರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಎದುರಿನಿಂದ ಪ್ರಾರಂಭಗೊಂಡ ಪ್ರತಿಭಟನಾ ಜಾಥಾ, ಹೆದ್ದಾರಿಯಲ್ಲಿ ಸಾಗಿಬಂದು ಬ್ರಹ್ಮಾವರ ಬಸ್ ನಿಲ್ದಾಣ ಬಳಿಯ ಕುಂಜಾಲುಕ್ರಾಸ್ ಬಳಿ ಸಮಾಪನಗೊಂಡು ಅಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೊಳಿ, ನಾವು ಈವರೆಗೆ ಕಬ್ಬು, ಸಕ್ಕರೆ, ಬೆಲ್ಲ, ಮಾಂಸ ಮುಂತಾದವನ್ನು ತಿಂದು ಅರಗಿಸಿಕೊಂಡಿದ್ದನ್ನು ನೋಡಿದ್ದೇವೆ. ಆದರೆ ಬ್ರಹ್ಮಾವರದಲ್ಲಿ ಆಡಳಿತ ಮಂಡಳಿ ಕಬ್ಬಿಣವನ್ನೇ ತಿಂದು ಅರಗಿಸಿಕೊಂಡಿದೆ. ಪಕ್ಕದ ಕಾರ್ಕಳದಲ್ಲಿ ಕಂಚನ್ನು (ಪರಶುರಾಮ ಮೂರ್ತಿಯದು) ತಿಂದು ಅರಗಿಸಿಕೊಂಡಿದ್ದರೆ, ಇಲ್ಲಿ ಕಾರ್ಖಾನೆಯ ಪಂಚಾಂಗದ ಶಿಲೆ ಕಲ್ಲನ್ನೇ ಸಾಲು ಸಾಲು ತಿಂದು ಅರಗಿಸಿಕೊಂಡಿದ್ದಾರೆ ಎಂದರು.
ಕಾರ್ಖಾನೆಯ ನಡಾವಳಿಗಳನ್ನು ಪರಿಶೀಲಿಸಿದಾಗ ಗುಜರಿಗೆ ಬಿಡ್ಡುದಾರ ರಾಗಿ ಭಾಗವಹಿಸಿದ ಚೆನ್ನೈ ಮೂಲದ ರಾಯಲ್ ಸಂಸ್ಥೆಯನ್ನು ಕರೆಸುವಲ್ಲಿಯೇ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದ ಮರೋಳಿ, ನಗರಸಭೆಯಲ್ಲಿ ಕುಳಿತು ಅಯುಕ್ತ ರಿಗೆ ದಮಕಿ ಹಾಕುವ ತಾಕತ್ತು ಇರುವ ಉಡುಪಿ ಶಾಸಕರಿಗೆ ಇಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಮಾತನಾಡುವ ತಾಕತ್ತು ಇಲ್ಲವೇ ಎಂದು ಪ್ರಶ್ನಿಸಿದರು. ಈ ಬಗ್ಗೆ ನೀವು ಮಾತನಾಡದೇ ಹೋದರೆ, ಇಲ್ಲಿನ ಭ್ರಷ್ಟ ಹಣ ಕಳೆದ ವಿಧಾನ ಸಭಾ ಚುನಾವಣೆಯಲ್ಲೂ ಬಳಕೆ ಆಗಿದೆ ಎಂದು ನಾವು ಅನಿವಾರ್ಯವಾಗಿ ಹೇಳಬೇಕಾಗುತ್ತದೆ ಎಂದರು.
ಆಸ್ಕರ್ ಫೆರ್ನಾಂಡೀಸ್ ಅವರ ಕನಸಿನ ಕೂಸಾದ ಈ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಕೋಟ್ಯಾಂತರ ರೂ. ಭ್ರಷ್ಟಾ ಚಾರ ರಾಜ್ಯ ಮಟ್ಟದ ಸುದ್ದಿಯಾಗಬೇಕು. ಕಬ್ಬಿಣಕ್ಕೆ ತುಕ್ಕು ಹಿಡಿಯುವುದು ನಮಗೆ ಗೊತ್ತು, ಆದರೆ ಶಿಲೆಕಲ್ಲಿಗೂ ತುಕ್ಕು ಹಿಡಿಯುವು ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಮಾತ್ರ ಕೇಳಿರುವುದು ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಈ ಭ್ರಷ್ಟಾಚಾರದ ವಿರುದ್ಧ ನಾವೀಗ ಜನಜಾಗೃತಿ ಮೂಡಿಸದೇ ಇದ್ದರೆ, ರಿಯಲ್ ಎಸ್ಟೇಟ್ ಬೂಮ್‌ನಲ್ಲಿ ಈ ಸಮಯದಲ್ಲಿ ಇಲ್ಲಿರುವ 110 ಎಕರೆ ಬೆಲೆಬಾಳುವ, ಅಮೂಲ್ಯ ಜಾಗವನ್ನು ಅವರು ಕ್ರಮೇಣ ಬೇರೆ ಬೇರೆ ಕಾರಣಗಳ ಮೇಲೆ ಮಾರಾಟ ಮಾಡುವ ಕೆಲಸ ಆಗಬಹುದು. ಇದಕ್ಕೆ ಕಾಂಗ್ರೆಸ್ ಖಂಡಿತಕ್ಕೂ ಅವಕಾಶ ನೀಡುವುದಿಲ್ಲ ಎಂದು ಸುಧೀರ್ ಕುಮಾರ್ ಘೋಷಿಸಿದರು.
ನಾವೀಗ ತುರ್ತಾಗಿ ಆಡಳಿತ ಮಂಡಳಿ ತಿಂದಿರುವ ಕಬ್ಬಿಣವನ್ನು ಕಕ್ಕಿಸ ಬೇಕಾದ ಅನಿವಾರ್ಯತೆ ಇದೆ. ಇವರು ತಿಂದಿರು ವುದು ರೈತರಿಗೆ ಸೇರಬೇಕಾದ ಹಣ. ನಮ್ಮ ಸಂಸದೆ ಶೋಭಾ ಕರಂದ್ಲಾಂಜೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಬಾರದು. ಏಕೆಂದರೆ ಕೃಷಿಗೆ ಸಂಬಂಧಿಸಿದ ಕಾರ್ಖಾನೆ. ಹೀಗಾಗಿ ಕೃಷಿ ಸಚಿವರಾದ ನೀವು ಇದರ ಕುರಿತು ಮಾತನಾಡಲೇಬೇಕು ಎಂದು ಮರೋಳಿ ಆಗ್ರಹಿಸಿದರು.
14 ಕೋಟಿ ರೂ.ಗಳಿಗೂ ಅಧಿಕ ಭ್ರಷ್ಟಾಚಾರ ನಡೆಸಿರುವ ಕಾರ್ಖಾನೆಯ ಆಡಳಿತ ಮಂಡಳಿ ತಕ್ಷಣ ರಾಜಿನಾಮೆ ಕೊಟ್ಟು ನಿರ್ಗಮಿಸಬೇಕು. ಆಡಳಿತ ಮಂಡಳಿಯ ಎಲ್ಲಾ 14 ಮಂದಿ ಆರೋಪಿಗಳಾಗಿ ಪೊಲೀಸ್ ಠಾಣೆಯಲ್ಲಿ ನಿಲ್ಲಬೇಕಾಗುತ್ತದೆ. ಇದಕ್ಕಾಗಿಯೇ ಕಾಂಗ್ರೆಸ್ ಜನಪರ ಚಳವಳಿ ನಡೆಸುತ್ತಿದೆ. ಸರಕಾರ, ಸಹಕಾರಿ ಇಲಾಖೆಯ ಅಧಿಕಾರಿಯೂ ಶಾಮೀಲಾ ಗಿರುವ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಂಗ್ರೆಸ್ ನಾಯಕ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದ ಜಿಲ್ಲಾ ರೈತ ಸಂಘ ಅವಿರತ ಪರಿಶ್ರಮದಿಂದ ಇಡೀ ಹಗರಣವನ್ನು ಬಯಲಿಗೆಳೆದಿದೆ. ಇದೀಗ ಅವರು ಕಾನೂನು ಹೋರಾಟಕ್ಕೂ ಚಾಲನೆ ನೀಡಿದ್ದಾರೆ. ಈ ಹಗರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಅವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರೆ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಬೈಂದೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಎಂ.ಎ. ಗಫೂರ್, ಮುನಿಯಾಲು ಉದಯ್‌ಕುಮಾರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವೆರಾ, ಬಿ.ಭುಜಂಗ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ದಿನಕರ ಹೇರೂರು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.