ಜ.19ರಿಂದ ಯಕ್ಷರಂಗಾಯಮದಲ್ಲಿ ನಾಟಕೋತ್ಸವ
ಉಡುಪಿ, ಜ.18: ಕಾರ್ಕಳ ಯಕ್ಷ ರಂಗಾಯಣದ ವತಿಯಿಂದ ಜನವರಿ 19ರಿಂದ 21ರವರೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಕಲ್ಲರಳಿ ಹೂವಾಗಿ- ಮಕರಾಯನ ನಾಟಕೋತ್ಸವ ಹಾಗೂ ನಿರ್ದಿಗಂತ ಮತ್ತು ನೀನಾಸಮ್ ತಿರುಗಾಟದ ನಾಟಕಗಳು ನಡೆಯಲಿವೆ.
ನಾಟಕೋತ್ಸವವನ್ನು ಜನವರಿ 19ರಂದು ಸಂಜೆ 6:15ಕ್ಕೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಭಾಗವಹಿಸಲಿದ್ದಾರೆ.
ಅಂದು ಸಂಜೆ 6:30ಕ್ಕೆ ನಿರ್ದಿಗಂತ ಪ್ರಸ್ತುತ ಪಡಿಸುವ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನಗೊಳ್ಳಲಿದೆ. ಜ.20ರಂದು ಸಂಜೆ 4 ಗಂಟೆಗೆ ಅಕ್ಷರ ಕೆ.ವಿ. ಅವರೊಂದಿಗೆ ಇಂದಿನ ನಾಟಕ ಮುಂದಿನ ನೋಟ- ವಿಷಯದ ಕುರಿತು ರಂಗಸಂವಾದ, ಸಂಜೆ 6:30ಕ್ಕೆ ನೀನಾಸಮ್ ತಿರುಗಾಟದ ನಾಟಕ ಮಾಲತೀಮಾಧವ, ಜ.21ರಂದು ಸಂಜೆ 6:30ಕ್ಕೆ ನೀನಾಸಮ್ ತಿರುಗಾಟದ ನಾಟಕ ಅಂಕದ ಪರದೆ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.