ಫೆ.19-24ರವರೆಗೆ ಕುಂದಾಪುರದಲ್ಲಿ ಉಚಿತ ಬಂಜೆತನ ತಪಾಸಣೆ, ಚಿಕಿತ್ಸಾ ಶಿಬಿರ
ಕುಂದಾಪುರ, ಫೆ.17: ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರದ ಕಾಯ ಚಿಕಿತ್ಸಾ, ಪ್ರಸೂತಿ ತಂತ್ರ ಮತ್ತು ರೋಗ ನಿಧಾನ ವಿಭಾಗದ ವತಿಯಿಂದ ಉಚಿತ ಬಂಜೆತನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಫೆ.19ರಿಂದ 24ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ತಿಳಿಸಿದ್ದಾರೆ.
ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದವು ನಮ್ಮ ಭಾರತೀಯ ಪುರಾತನ ವೈದ್ಯಕೀಯ ಚಿಕಿತ್ಸಾ ಪದ್ದತಿಯಾಗಿದ್ದು, ಅನೇಕ ರೋಗಗಳಿಗೆ ಪರಿಣಾಮಕಾರಿ ಯಾದ ಚಿಕಿತ್ಸೆಯನ್ನು ನೀಡಲು ಸಮರ್ಥವಾಗಿದೆ. ಆಯುರ್ವೇದವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಮೃತೇಶ್ವರಿ ಶಿಕ್ಷಣ ಸಂಸ್ಥೆಯವರು ಕುಂದಾಪುರ ಪರಿಸರದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ ಎಂದರು.
ನಮ್ಮ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ತಪಾಸಣೆ, ಪರಿಣಾಮಕಾರಿ ಚಿಕಿತ್ಸೆ ಹಾಗೂ ಉತ್ತಮ ಆಯುರ್ವೇದ ಔಷಧಗಳ ಸೌಲಭ್ಯಗಳು ಲಭ್ಯವಿದೆ. ಕುಂದಾಪುರದ ನಗರ ಹಾಗೂ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆಯಬೇಕೆಂಬುದು ನಮ್ಮ ಆಶಯವಾಗಿದೆ. ಸುಸಜ್ಜಿತ ಒಳರೋಗಿ ಮತ್ತು ಹೊರರೋಗಿ ವಿಭಾಗ, ರೋಗ ನಿದಾನ ವಿಭಾಗ (ಲ್ಯಾಬೋರೇಟರಿ, ಎಕ್ಸ್-ರೇ), ಪಂಚಕರ್ಮ ವಿಭಾಗ ಹಾಗೂ ಇತರೆಲ್ಲಾ ವಿಭಾಗಗಳು ಆಸ್ಪತ್ರೆಯಲ್ಲಿವೆ ಎಂದರು.
ಆರು ದಿನಗಳ ಕಾಲ ಉಚಿತ ಬಂಜೆತನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ನಡೆಯಲಿದ್ದು ಮದುವೆಯಾಗಿ ಒಂದು ವಷಕ್ಕಿಂತ ಹೆಚ್ಚು ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದಲ್ಲಿ ಅಥವಾ ದಂಪತಿಗಳಲ್ಲಿ ಯಾವುದೇ ತರಹದ ಸಮಸ್ಯೆಗಳಿದ್ದಲ್ಲಿ ಅದಕ್ಕೆ ತಪಾಸಣೆ ಮತ್ತು ಚಿಕಿತ್ಸೆ ಲಭ್ಯವಿದೆ ಎಂದವರು ತಿಳಿಸಿದರು.
ಶಿಬಿರದಲ್ಲಿ ಉಚಿತ ತಪಾಸಣೆ, ಪಥ್ಯಾಹಾರ ಸಲಹೆ ಹಾಗೂ ಶೇ.10 ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಪ್ರಯೋಗಾಲಯ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಪ್ರದೀಪ ಕುಮಾರ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ್ ಆಚಾರ್ಯ, ಡಾ. ಪೂಜಾ ಶೆಟ್ಟಿ ಹಾಗೂ ಡಾ. ಅಕ್ಷತಾ ಉಪಸ್ಥಿತರಿದ್ದರು.