2003ರ ಈದು ನಕ್ಸಲ್ ಎನ್‌ಕೌಂಟರ್: ಶಿಥಿಲಗೊಂಡ ಮನೆಗೆ ಇನ್ನೂ ಸಿಕ್ಕಿಲ್ಲ ನಯಾಪೈಸೆ ಪರಿಹಾರ
ಉಡುಪಿ, ಮಾ.5: ಕರಾವಳಿ ಮತ್ತು ಮಲೆನಾಡು ಭಾಗದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಕ್ಸಲರ ಇರುವಿಕೆಯನ್ನು ಜಗತ್ತಿಗೆ ಸಾರಿದ 2003ರ ನ.17ರಂದು ರಾತ್ರಿ ನಟ್ಟಿರುಳಿನಲ್ಲಿ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೊಲೀಸ್ ಇಲಾಖೆಯ ಈದು ನಕ್ಸಲ್ ಎನ್‌ಕೌಂಟರ್‌ನಿಂದ ಸಂಪೂರ್ಣ ಶಿಥಿಲಗೊಂಡ ಮನೆಗೆ ಇದುವರೆಗೆ ನಯಾಪೈಸೆ ಪರಿಹಾರವನ್ನು ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯೂ ನೀಡಿಲ್ಲ.
ಮನೆಯ ಯಜಮಾನರಾದ ರಾಮಪ್ಪ ಪೂಜಾರಿ ಅವರ ಮಗ ಪ್ರಶಾಂತ ಪೂಜಾರಿ ಇಂದು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದರು.
ಕಾರ್ಕಳ ತಾಲೂಕು ಈದು ಗ್ರಾಮದ ಬೊಲ್ಲೊಟ್ಟು ನಿವಾಸಿಯಾದ ರಾಮಪ್ಪ ಪೂಜಾರಿ ಅವರ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಕಾಡಿನ ಮಧ್ಯೆ ಇರುವ ಮನೆಯಲ್ಲಿ ಮಧ್ಯರಾತ್ರಿ ಸುಮಾರಿಗೆ ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದಿತ್ತು. ಪೊಲೀಸ್ ಅಧಿಕಾರಿ ಅಶೋಕಕುಮಾರ್ ನೇತೃತ್ವದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹಾಜಿಮಾ ಹಾಗೂ ಪಾರ್ವತಿ ಎಂಬ ಇಬ್ಬರು ಯುವತಿಯರು ಪೊಲೀಸರ ಗುಂಡಿಗೆ ಬಲಿಯಾದರೆ, ಯಶೋಧ ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಗುಂಡಿನ ಚಕಮಕಿಗೆ ನಮ್ಮ ಮನೆ ಸಂಪೂರ್ಣ ಶಿಥಿಲವಾಗಿತ್ತು. ಮನೆಯನ್ನು ನಿರ್ಮಿಸಿಕೊಡುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿತು. ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಸರಕಾರ ಹಾಗೂ ಅಧಿಕಾರಿಗಳು ನೂತನ ಮನೆ ನಿರ್ಮಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆಯನ್ನು ಮೌಖಿಕವಾಗಿ ನೀಡಿದ್ದರು ಎಂದು ಪ್ರಶಾಂತ್ ಪೂಜಾರಿ ತಿಳಿಸಿದರು.
ಎನ್‌ಕೌಂಟರ್ ನಡೆದ ದಿನಗಳಲ್ಲಿ ವಿವಿಧ ಸಚಿವರು, ಜನಪ್ರತಿನಿಧಿಗಳು, ರಾಜಕಾರಣಿಗಳು ಮನೆಯ ಮುಂದೆ ಬಂದು ಸಾಂತ್ವನ ಹೇಳಿದ್ದರು. ಆಗಿನ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ಚಿರಂಜೀವಿ ಸಿಂಗ್ ಸಹ ಮನೆಗೆ ಬಂದು ಪರಿಹಾರದ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೂ ಈಡೇರಿಲ್ಲ ಎಂದರು.
ನೋವು ಅನುಭವಿಸಿದ ತಂದೆ: ಘಟನೆ ನಡೆದು 21 ವರ್ಷಗಳಾಗಿವೆ. ಗುಂಡಿನ ಚಕಮಕಿಯಲ್ಲಿ ಶಿಥಿಲಗೊಂಡ ಮನೆಗೆ ಯಾವುದೇ ಪರಿಹಾರ ಧನ ಬಂದಿಲ್ಲ. ಸರಕಾರದ ಧೋರಣೆಯಿಂದ ಬೇಸತ್ತ ತಂದೆ ತುಂಬಾ ನೋವು ಅನುಭವಿಸಿ ವಯೋಸಹಜವಾಗಿ ನಿಧನರಾದರು. ಅವರ ಕನಸಿನಂತೆ ಬ್ಯಾಂಕ್‌ಗೆ ಮನೆಯ ಜಾಗವನ್ನು ಅಡವಿಟ್ಟು ಸಾಲ ಮಾಡಿ ಸಣ್ಣ ಆರ್‌ಸಿಸಿ ಮನೆ ನಿರ್ಮಿಸಿದೆವು. ಪ್ರಸ್ತುತ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಸಾಲದ ಕಂತು ಸರಿಯಾಗಿ ಕಟ್ಟಲಾಗುತ್ತಿಲ್ಲ ಎಂದವರು ಹೇಳಿದರು.
ಬ್ಯಾಂಕ್‌ನಿಂದ ಕಿರುಕುಳ: ಮನೆ ಕಟ್ಟಲು 2004ರಲ್ಲಿ ಕೆನರಾ ಬ್ಯಾಂಕಿನಿಂದ (ಹಿಂದಿನ ಸಿಂಡಿಕೇಟ್ ಬ್ಯಾಂಕ್) 9 ಲಕ್ಷ ರೂ. ಸಾಲ ಮಾಡಿದ್ದೆವು. ಬಡ್ಡಿ ಸೇರಿ ಅದೀಗ 15.71ಲಕ್ಷಕ್ಕೇರಿದೆ. ಬ್ಯಾಂಕಿನವರು ನೋಟೀಸುಗಳನ್ನು ನೀಡುತಿದ್ದಾರೆ. ಬ್ಯಾಂಕಿನವರ ಕಿರುಕುಳದಿಂದ ನಮ್ಮ ಕುಟುಂಬ ಕಂಗೆಟ್ಟಿದೆ ಎಂದು ಪ್ರಶಾಂತ್ ಪೂಜಾರಿ ತಿಳಿಸಿದರು.
ರಾಜ್ಯದಲ್ಲೀಗ ನಕ್ಸಲರೆಲ್ಲರು ಶರಣಾಗತರಾಗಿದ್ದು, ಅವರಿಗೆ ಪರಿಹಾರ ನೀಡಲಾಗಿದೆ. ರಾಜ್ಯ ನಕ್ಸಲ್ ಮುಕ್ತವಾಗಿದೆ. ನಕ್ಸಲ್ ಸಮಸ್ಯೆಯಿಂದ ಶೋಷಿತವಾಗಿರುವ ನಮ್ಮ ಕುಟುಂಬಕ್ಕೂ ಸರಕಾರದಿಂದ ಸೂಕ್ತ ಪರಿಹಾರಧನ ನೀಡುವಂತೆ ಮನವಿ ಮಾಡುತ್ತೇವೆ. ಪರಿಹಾರ ನೀಡದಿದ್ದರೂ, ಮನೆಗೆ ಮಾಡಿರುವ ಸಾಲವನ್ನು ರೈಟ್‌ಆಫ್ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಪರಿಹಾರಕ್ಕಾಗಿ ಪೊಲೀಸ್ ಇಲಾಖೆಗೆ, ಕಂದಾಯ ಇಲಾಖೆಗೆ, ಜಿಲ್ಲಾಡಳಿತಕ್ಕೆ, ಸರಕಾರಕ್ಕೆ, ಸಚಿವರಿಗೆ, ಶಾಸಕರಿಗೆ ಎಲ್ಲರಿಗೂ ಮನವಿ ಸಲ್ಲಿಸಿಯಾಗಿದೆ. ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಶಾಂತ್ ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈಗ ಗ್ರಾಪಂನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪುರುಷೋತ್ತಮ್, ಈದು ಗ್ರಾಮ ಅರಣ್ಯ ಸಮಿತಿಯ ರಾಜು ಪೂಜಾರಿ, ಸುಧಾಕರ ಪೂಜಾರಿ, ರಾಮಪ್ಪ ಪೂಜಾರಿ ಅವರ ಮಗ ಯಶೋಧರ ಉಪಸ್ಥಿತರಿದ್ದರು.