2025ನೇ ಸಾಲಿನ ಕೇಶವ ಪ್ರಶಸ್ತಿಗೆ ಡಾ.ರಮಾನಂದ ಬನಾರಿ ಆಯ್ಕೆ
ಉಡುಪಿ, ಅ.6: ಕಾಸರಗೋಡಿನ ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಇವರನ್ನು 2025ನೇ ಸಾಲಿನ ಕೇಶವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್‌ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ತಿಂಗಳ 18ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಬನಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.
ಡಾ. ರಮಾನಂದ ಬನಾರಿ ಅವರು ಕಾಸರಗೋಡಿನ ಖ್ಯಾತ ಪ್ರಸಂಗಕರ್ತ ಕೀರಿಕ್ಕಾಡು ವಿಷ್ಣು ಭಟ್ಟ ಹಾಗೂ ಜಾನಪದ ಹಾಡುಗಾರ್ತಿ ಪರಮೇಶ್ವರಿ ಅಮ್ಮ ಅವರ ಪುತ್ರ. 1940ರ ಜೂನ್ 4ರಂದು ಕಾಸರಗೋಡಿನ ಕೀರಿಕ್ಕಾಡಿ ನಲ್ಲಿ ಜನಿಸಿದ ಬನಾರಿ, ವೃತ್ತಿಯಿಂದ ವೈದ್ಯರಾಗಿದ್ದು, ಪ್ರವೃತ್ತಿಯಿಂದ ಬರಹಗಾರರು, ತಾಳಮದ್ದಳೆ ಅರ್ಥಧಾರಿಗಳು.
ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನಿಂದ ಎಂ.ಬಿ.ಬಿ.ಎಸ್. ಪದವಿ ಪಡೆದಿರುವ ಡಾ.ಬನಾರಿ, ವೃತ್ತಿಯೊಂದಿಗೆ 20ಕ್ಕೂ ಅಧಿಕ ಕೃತಿಗಳನ್ನು ರಚಿಸಿ ದ್ದಾರೆ.ಇವರ 10ಕ್ಕೂ ಹೆಚ್ಚು ಸಂಪಾದಿತ ಕೃತಿಗಳು ಪ್ರಕಟವಾಗಿವೆ. ಸಾಹಿತ್ಯ, ಯಕ್ಷಗಾನ, ಕಾಸರಗೋಡು ಕನ್ನಡ ಪರ ಹೋರಾಟ, ಭಾಷಣ, ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸ್ಥಾಪಕಾಧ್ಯಕ್ಷರಾಗಿ, ಸದಸ್ಯರಾಗಿ, ಸಂಘಟಕ ರಾಗಿ ಕಾರ್ಯನಿರ್ವಹಿಸಿದ್ದಾರೆ.
ಡಾ.ರಮಾನಂದ ಬನಾರಿ ಅವರಿಗೆ ಗುಲಬರ್ಗಾದ ಡಾ. ಎಸ್.ಪಿ. ಶಂಕರ್ ಪ್ರತಿಷ್ಠಾನದ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಗೋವಿಂದ ಪೈ ಕಲಾ ಅಕಾಡೆಮಿ ಪ್ರಶಸ್ತಿ, ಶ್ರೇಷ್ಠ ಕುಟುಂಬ ವೈದ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾವ್ಯ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸಂಮಾನಗಳಿಗೆ ಭಾಜನರಾಗಿದ್ದಾರೆ.