×
Ad

ಜ.25ರಿಂದ 15ನೇ ಫಲಪುಷ್ಪ ಪ್ರದರ್ಶನ: ಪಂಚಗ್ಯಾರಂಟಿ ಯೋಜನೆಗಳ ಪುಷ್ಪ ಕಲಾಕೃತಿ ವಿಶೇಷ ಆಕರ್ಷಣೆ

Update: 2025-01-23 19:59 IST

ಉಡುಪಿ, ಜ.23: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯ 15ನೇ ಫಲಪುಷ್ಪ ಪ್ರದರ್ಶನವನ್ನು ಜ.25ರಿಂದ 27ರವರೆಗೆ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 7000 ಸಂಖ್ಯೆಯ 23 ಜಾತಿಯ ಹೂವಿನ ಗಿಡಗಳಾದ ಪಟೂನಿಯ, ಸೆಲೋಷಿಯಾ, ಸಾಲ್ವಿಯಾ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಸಮ್, ತೊರೇನಿಯ, ಯುಜೀನಿಯಾ, ಗುಲಾಜಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಮುಂತಾದ ಗಿಡಗಳನ್ನು ಜೋಡಿಸಲಾಗುತ್ತದೆ ಎಂದರು.

ವಿವಿಧ ಪುಷ್ಪಗಳನ್ನು ಉಪಯೋಗಿಸಿ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹ ಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿಗಳ ಕಲಾಕೃತಿಗಳನ್ನು ಒಳಗೊಂಡ ಪ್ರದರ್ಶಿಕೆಗಳ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆ ಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗ ದರ್ಶನದ ಮೇರೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಯೋಜನೆಯ ಕಲಾಕೃತಿ ಗಳನ್ನು ರಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 1.25ಲಕ್ಷ ಸಂಖ್ಯೆಯ ಗುಲಾಬಿ, ಸೇವಂತಿಗೆ, ಆರ್ಕೀಡ್ಸ್, ಲಿಲಿಯಮ್ ಹಾಗೂ ಇತರ ಹೂವುಗಳನ್ನು ಬಳಸಿ ವಿವಿಧ ಕಲಾಕೃತಿಗಳನ್ನು ತಯಾರಿಸಲಾಗುತ್ತದೆ. ಸುವರ್ಣ ಕರ್ನಾಟಕ ಸಂಭ್ರಮದ ಪ್ರಯುಕ್ತ ಹೂವಿನಲ್ಲಿ ಅರಳಿದ ಕರ್ನಾಟಕ ಪ್ರತಿಕೃತಿ, ಹೂವುಗಳಿಂದ ತಯಾರಿಸಿದ ಸೆಲ್ಫಿ ರೆನ್ ಮಾದರಿ, ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಜೋಡಣೆ ಏರ್ಪಡಿಸಲಾಗುವುದು. ವಿವಿಧ ತರಕಾರಿಗಳ ಮಾದರಿ ಕೈತೋಟ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

ಜ.25ರಂದು ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಮತ್ತು ಜ.26ರಂದು ಕರಾವಳಿಗೆ ಸೂಕ್ತವಾದ ಹೊಸ ತೋಟಗಾರಿಕೆ ಬೆಳಗಳ ಕುರಿತು ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿದೆ. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಯನ್ನು ತೆರೆಯಲಾಗು ವುದು. ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳ ಪ್ರದರ್ಶಿಕೆ ಯನ್ನು ಪ್ರದರ್ಶಿಸಲಾಗುತ್ತದೆ.

ಪ್ರದರ್ಶನವನ್ನು ಜ.25ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿರುವರು. ಪ್ರದರ್ಶನವನ್ನು ವೀಕ್ಷಿಸಲು ಬೆಳಗ್ಗೆ 10ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News