ಫೆ.25ರಿಂದ ಮಾ.2: ಸುಮನಸಾ ಕೊಡವೂರು ರಂಗಹಬ್ಬ
ಉಡುಪಿ: ಸುಮನಸಾ ಕೊಡವೂರು ಇದರ ವತಿಯಿಂದ ನಡೆಯುವ ರಂಗಹಬ್ಬ-12 ನಾಟಕೋತ್ಸವ ಈ ಬಾರಿ ಫೆ.25ರಿಂದ ಮಾ.2ರವರೆಗೆ ನಡೆಯಲಿದೆ ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಸಂಜೆ 6:30ಕ್ಕೆ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಉಡುಪಿ ಹಾಗೂ ಸಂಸ್ಕೃತಿ ನಿರ್ದೇಶನಾಲಯ ಹೊಸದಿಲ್ಲಿ ಇವುಗಳ ಸಹಯೋಗದೊಂದಿಗೆ ಈ ಬಾರಿಯ ನಾಟಕೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಫೆ.25ರ ರವಿವಾರ ಸಂಜೆ 6:30ಕ್ಕೆ ಹಿರಿಯ ರಂಗ ನಿರ್ದೇಶಕ ಎಚ್.ಜನಾರ್ದನ್ (ಜಿನ್ನಿ) ನೆರವೇರಿಸಲಿದ್ದು, ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪ್ರತಿದಿನ ಜಿಲ್ಲೆಯ ರಂಗಸಾಧಕರಿಗೆ ಸನ್ಮಾನ ನಡೆಯಲಿದ್ದು, ಅದೃಷ್ಟ ಪ್ರೇಕ್ಷಕರಿಗೆ ಆಕರ್ಷಕ ಕೊಡಗೆಯನ್ನು ನೀಡಲಾಗು ತ್ತದೆ. ಕೊನೆಯ ದಿನದಂದು ಯು.ದುಗ್ಗಪ್ಪ ನೆನಪಿನಲ್ಲಿ ಪ್ರತಿವರ್ಷ ನೀಡಲಾಗುವ ‘ಯಕ್ಷಸುಮ’ ಪ್ರಶಸ್ತಿಗೆ ಈ ಬಾರಿ ಯಕ್ಷಗಾನ ಛಂದಸ್ಸುಗಾರ ಗಣೇಶ್ ಕೊಲೆಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದೂ ಎಂ.ಎಸ್.ಭಟ್ ತಿಳಿಸಿದರು.
ನಾಟಕೋತ್ಸವದಲ್ಲಿ ಒಟ್ಟು 7 ನಾಟಕಗಳು ನಡೆಯಲಿದ್ದು, ಆತಿಥೇಯರು ಮಾ.2ರಂದು ಪ್ರದರ್ಶಿಸುವ ತುಳು ನಾಟಕ ‘ಶಿಕಾರಿ’ ಯನ್ನು ಹೊರತು ಪಡಿಸಿದರೆ ಉಳಿದವೆಲ್ಲಾ ಕನ್ನಡ ನಾಟಕಗಳಾಗಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು,ಸಂಚಾಲಕ ಭಾಸ್ಕರ ಪಾಲನ್, ಉಪಾಧ್ಯಕ್ಷ ವಿನಯಕುಮಾರ್, ಯೋಗೀಶ್ ಕೊಳಲಗಿರಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕಲ್ಮಾಡಿ ಉಪಸ್ಥಿತರಿದ್ದರು.