×
Ad

ಫೆ.25: ತುಳುಕೂಟದಿಂದ ‘ತುಳುವೆರ್ ಗೊಬ್ಬುಲು-24’

Update: 2024-02-20 19:35 IST

ಉಡುಪಿ, ಫೆ.20: ತುಳುಕೂಟ ಉಡುಪಿ, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಉಡುಪಿ ಅಮೃತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುನಾಡಿನ ಗ್ರಾಮೀಣ ಕ್ರೀಡೆಗಳ ಸ್ಪರ್ಧಾಕೂಟ ‘ತುಳುವೆರ್ ಗೊಬ್ಬುಲು-2024’ ಇದೇ ಫೆ.25ರ ರವಿವಾರ ಬೆಳಗ್ಗೆ 9:00ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತುಳುಕೂಟದ ಸ್ಪರ್ಧಾ ಸಂಚಾಲಕ ಮಹಮ್ಮದ್ ಮೌಲಾ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು ಅಂದು ಬೆಳಗ್ಗೆ 9:00 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ, ಉದ್ಯಮಿ ಹರಿಪ್ರಸಾದ್ ರೈ, ನಿರುಪಮಾ ಪ್ರಸಾದ್ ಶೆಟ್ಟಿ, ಕೆ.ಸತ್ಯೇಂದ್ರ ಪೈ, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷೆ ಭಾರತಿ ಹರೀಶ್ ಸುವರ್ಣ, ಕ್ರಿಶ್ಚಿಯನ್ ಹೈಸ್ಕೂಲ್ ಮುಖ್ಯೋಪಾಧ್ಯಾಯನಿ ಜ್ಯೋಯಿಲಿನ್ ಪರಿಮಳ ಕರ್ಕಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಾರೋಪ ಸಮಾರಂಭ ಅಪರಾಹ್ನ 3ಗಂಟೆಗೆ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತುಳುನಾಡಿನ ಜನಪದ ಸಂಸ್ಕೃತಿಯ ತಿರುಳನ್ನು ಜನರಿಗೆ ತಿಳಿಸುವ ಹಾಗೂ ನಶಿಸಿ ಹೋಗುತ್ತಿರುವ ತುಳು ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಯುವಜನತೆಗೆ ತುಳು ಕ್ರೀಡೆಗಳ ಕುರಿತು ಅರಿವು, ಆಸಕ್ತಿ ಮೂಡಿಸಲು ಈ ವಿಶಿಷ್ಟ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಳುಕೂಟದ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ತಿಳಿಸಿದರು.

ಗುಂಪು ಸ್ಪರ್ಧೆಯಲ್ಲಿ ಹುಡುಗರಿಗೆ ಲಗೋರಿ (ತಂಡದಲ್ಲಿ 7 ಮಂದಿ), ಹ್ಗಜಗ್ಗಾಟ (ಗರಿಷ್ಠ 10 ಮಂದಿ), ಗೇರುಬೀಜದಾಟ (ಗರಿಷ್ಠ 5 ಮಂದಿ) ಸ್ಪರ್ಧೆಗಳಿದ್ದರೆ, ಹುಡುಗಿಯರಿಗೆ ಸೊಪ್ಪಾಟ (ಗರಿಷ್ಠ 7ಮಂದಿ), ಹ್ಗಜಗ್ಗಾಟ (10 ಮಂದಿ), ಗೇರುಜೀವದಾಟ (5ಮಂದಿ)ಗಳಿವೆ.

ವೈಯಕ್ತಿಕ ವಿಭಾಗದಲ್ಲಿ ಹುಡುಗರಿಗೆ ಗುಂಟುದ ಗೊಬ್ಬು (ಗುಂಟಾಟ), ಕರದರ್ಪುನಿ(ಮಡಕೆ ಒಡೆಯುವುದು), ತಾರಾಯಿದ ಕಟ್ಟ (ತೆಂಗಿನಕಾಯಿ ಅಂಕ), ಹುಡುಗಿಯರಿಗೆ ಗುಂಟದ ಗೊಬ್ಬು, ಕರದರ್ಪುನಿ ಹಾಗೂ ಮಡಲ್ ಮುಡೆವುನಿ (ತೆಂಗಿನಗರಿ ಹಣೆಯುವುದು) ಸ್ಪರ್ಧೆಗಳಿರುತ್ತವೆ.

ಸಾರ್ವಜನಿಕರಿಗೆ ಹಾಗೂ ತುಳುಕೂಟದ ಸದಸ್ಯರಿಗೆ ತಾರಾಯಿದ ಕಟ್ಟ (ಪುರುಷರಿಗೆ), ಕರದರ್ಪುನಿ (ಮಹಿಳೆಯರಿಗೆ), ಕೊಪ್ಪರಿಗೆ ನಾಡುವ ಗೊಬ್ಬು (ನಿಧಿ ಶೋಧ) ಹಾಗೂ ಸಬಿ ಸವಾಲ್ (ತುಳು ರಸಪ್ರಶ್ನೆ-ಕ್ವಿಝ್) ಸ್ಪರ್ಧೆಗಳಿರುತ್ತವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ದೂರವಾಣಿ ಸಂಖ್ಯೆ:9845608466 (ಮಹಮ್ಮದ್ ಮೌಲಾ) ಅಥವಾ 9036483463 (ಯಶೋಧ ಕೇಶವ್) ಇವರನ್ನು ಸಂಪರ್ಕಿಸಬಹುದು ಎಂದು ಹೆಗ್ಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್, ಭಾರತಿ ಬಿ.ಕೆ. ಹಾಗೂ ಯಶೋಧ ಕೇಶವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News