ಡಿ.26-28: ಕಾಪು ಬೀಚ್‌ನಲ್ಲಿ ಕಡಲ ಪರ್ಬ
ಕಾಪು, ಡಿ.23: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ಪ್ರಯುಕ್ತ ಕಾಪು ಮಂಡಲ ಬಿಜೆಪಿ ವತಿಯಿಂದ ಇದೇ 26ರಿಂದ ಮೂರು ದಿನಗಳ ಕಾಲ ಕಾಪು ಲೈಟ್‌ಹೌಸ್ ಬೀಚ್‌ನಲ್ಲಿ ಕಾಪು ಕಡಲ ಪರ್ಬವನ್ನು ಆಯೋಜಿಸಲಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಕಾಪುವಿನಲ್ಲಿ ಮಂಗಳವಾರ ಕಡಲಪರ್ಬ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ಸವದಲ್ಲಿ ಬೀಚ್ ಉತ್ಸವ, ಆಹಾರ ಮೇಳ, ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವಗಳು ನಡೆಯಲಿವೆ. ಕಡಲ ಪರ್ಬವನ್ನು ಡಿ.26ರಂದು ಸಂಜೆ 7ಗಂಟೆಗೆ ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಉದ್ಘಾಟಿಸಲಿದ್ದಾರೆ ಎಂದವರು ತಿಳಿಸಿದರು.
ಡಿ.26ರ ಶುಕ್ರವಾರ ಸಂಜೆ 3 ಗಂಟೆಗೆ ಕಾಪು ಬೀಚ್ ಬಳಿಯ ಕೋಟ್ಯಾನ್‌ಕಾರ್ ಮೂಲಸ್ಥಾನದಲ್ಲಿ ‘ನಾ ಕಂಡಂತೆ ಅಟಲ್’ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, 4 ಗಂಟೆಗೆ ಆತ್ಮ ನಿರ್ಭರ ಭಾರತ ವಿಷಯದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, 6 ಗಂಟೆಗೆ ಪುತ್ತೂರು ಜಗದೀಶ ಆಚಾರ್ಯರಿಂದ ಸಂಗೀತ ಸಂಜೆ ನಡೆಯಲಿದೆ ಬಳಿಕ ಆಹಾರ ಮೇಳ ಉದ್ಘಾಟನೆಗೊಳ್ಳಲಿದೆ ಎಂದರು.
7 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಲಾಲಾಜಿ ಅರ್ ಮೆಂಡನ್ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಕರಾವಳಿಯ ಶಾಸಕರೆಲ್ಲರೂ ಉಪಸ್ಥಿತರಿ ರುವರು ಎಂದರು.
27ರಂದು ಬೆಳಗ್ಗೆ 9:30ರಿಂದ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಹಾಗೂ ದಂತ ಚಿಕಿತ್ಸಾ ಶಿಬಿರ, ಅಪರಾಹ್ನ 2:30ಕ್ಕೆ ಪುರುಷರು ಹಾಗೂ ಮಹಿಳೆಯರಿಗೆ ಬೀಚ್ ಹಗ್ಗಜಗ್ಗಾಟ, ಬೀಚ್‌ನಲ್ಲಿ ಮರಳು ಶಿಲ್ಪ ರಚನೆ ಸ್ಪರ್ಧೆ ನಡೆಯಲಿವೆ. ಸಂಜೆ 7 ಗಂಟೆಗೆ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಪ್ರಮುಖರು ಭಾಗವಹಿಸುವರು. ರಾತ್ರಿ 8 ಗಂಟೆಗೆ ರಘು ದೀಕ್ಷಿತ್‌ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
28ರಂದು ಬೆಳಗ್ಗೆ 9:30ರಿಂದ ಬೃಹತ್ ಆರೋಗ್ಯ ಶಿಬಿರ, 11:30ಕ್ಕೆ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾಟ ಜರಗಲಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸಹಿತ ಪ್ರಮುಖರು ಭಾಗವಹಿಸುವರು. ರಾತ್ರಿ 8 ಗಂಟೆಗೆ ಕುನಾಲ್ ಗಾಂಜಾವಾಲಾ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಗುರ್ಮೆ ಸುರೇಶ್ ಶೆಟ್ಟಿ ವಿವರಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಡಾ. ವಿದ್ಯಾದರ್, ಡಾ. ದೇವದಾಸ್ ಕಾಮತ್ ಹಿರಿಯಡ್ಕ ಸಹಿತ ಐದು ಮಂದಿ ಸಾಧಕರಿಗೆ ಅಟಲ್ ಸಾಧನಾ ಪ್ರಶಸ್ತಿ, ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಶಿಲ್ಪಾ ಜಿ ಸುವರ್ಣ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣ್‌ಕುಮಾರ್ ಮಟ್ಟು ಮತ್ತು ಗೋಪಾಲಕೃಷ್ಣ ರಾವ್, ಕೃಷ್ಣ ರಾವ್ ಉಪಸ್ಥಿತರಿದ್ದರು.