×
Ad

3ಕಿ.ಮೀ. ಸರ್ವಿಸ್ ರಸ್ತೆ, ಪ್ಲೈಓವರ್ ಬೇಡಿಕೆಗೆ ಆಗಸ್ಟ್‌ವರೆಗೆ ಅವಕಾಶ; ತಪ್ಪಿದಲ್ಲಿ ಸೆ.4ಕ್ಕೆ ಬ್ರಹ್ಮಾವರ ಬಂದ್: ರಾ.ಹೆದ್ದಾರಿ ಉಳಿಸಿ ಸಮಿತಿ

Update: 2025-07-26 20:59 IST

ಬ್ರಹ್ಮಾವರ, ಜು.26: ದಶಕಗಳ ಬೇಡಿಕೆಯಾಗಿರುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ 3 ಕಿ.ಮೀ ದೂರ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ 7 ಪಿಲ್ಲರ್‌ಗಳ ಫ್ಲೈಓವರ್ ನಿರ್ಮಾಣಕ್ಕೆ ಸ್ಪಂದಿಸಿ ಆಗಸ್ಟ್ ಅಂತ್ಯದೊಳಗೆ ಲಿಖಿತ ಆದೇಶ ನೀಡದಿದ್ದರೆ ಸೆಪ್ಟೆಂಬರ್ 4ರಂದು ಬ್ರಹ್ಮಾವರ ಬಂದ್ ಕರೆ ನೀಡಲಾ ಗುವುದು ಎಂದು ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿಯ ಸಂಚಾಲಕ ಗೋವಿಂದ ರಾಜ್ ಹೆಗ್ಡೆ ಹೇಳಿದ್ದಾರೆ.

ಶನಿವಾರ ಬ್ರಹ್ಮಾವರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.4ರಂದು ಇಲ್ಲಿ ಸೇರುವ 8 ಗ್ರಾಮಗಳ ಗ್ರಾಮಸ್ಥರಿಂದಲೇ ಶ್ರಮದಾನದ ಮೂಲಕ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾ ಗುತ್ತದೆ ಎಂದು ಅವರು ತಿಳಿಸಿದರು.

ಬ್ರಹ್ಮಾವರ ರಾ.ಹೆದ್ದಾರಿಯಲ್ಲಿ ದಕ್ಷಿಣದ ಭದ್ರಗಿರಿಯಿಂದ ಉತ್ತರದ ಮಾಬುಕಳ ಸೇತುವೆಯವರೆಗೆ ಹೆದ್ದಾರಿಯ 2 ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕು. ಆಕಾಶವಾಣಿ ಜಂಕ್ಷನ್‌ನಿಂದ ಮಹೇಶ್ ಆಸ್ಪತ್ರೆವರೆಗೆ 7 ಪಿಲ್ಲರ್‌ಗಳನ್ನು ಒಳಗೊಂಡ ಫ್ಲೈಓವರ್ ನಿರ್ಮಾಣವಾಗಬೇಕು ಎಂದು ಇಂದು ನಡೆದ ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿ ಇಂದು ನಡೆಸಿದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ ಎಂದರು.

ಉಪ್ಪಿನಕೋಟೆ, ಬ್ರಹ್ಮಾವರ ಬೈಪಾಸ್, ದೂಪದಕಟ್ಟೆಯಲ್ಲಿ ಮೀಡಿಯನ್ ಓಪನ್ ಇಡಬೇಕೆಂಬ ಬೇಡಿಕೆ ಇರಿಸಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಸಮಿತಿ ಈ ಬಗ್ಗೆ ಧ್ವನಿಯೆತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೋವಿಂದರಾಜ ಹೆಗ್ಡೆ ದೂರಿದರು.

ದಶಕಗಳ ಹಿಂದೆ ಬ್ರಹ್ಮಾವರದಲ್ಲಿ ಹೆದ್ದಾರಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿನ ಹೆದ್ದಾರಿ ಅವ್ಯವಸ್ಥೆಗಳ ವಿರುದ್ಧ ಹಾಗೂ ಆಗಬೇಕಾದ ಕಾಮಗಾರಿಗಳ ಕುರಿತು ಹೋರಾಟ, ಮನವಿ, ಸಭೆಗಳನ್ನು ನಡೆಸಿದರೂ ಕೂಡ ಈ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಕೇವಲ 400 ಮೀ ರಸ್ತೆಯನ್ನು ಅವೈಜ್ಞಾ ನಿಕವಾಗಿ ಮಾಡುವ ಘೋಷಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಬ್ರಹ್ಮಾವರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ (2020ರಿಂದ 2025ರವರೆಗೆ) ಆಗಿರುವ ಅಪಘಾತ ಗಳು 247. ಇವುಗಳಲ್ಲಿ 62 ಮಾರಕ ವಾಗಿದ್ದು, 185 ಸಾಧಾರಣ ಮಟ್ಟದ್ದಾಗಿದೆ. ಪೊಲೀಸರು ಇಲ್ಲಿನ ಆರು ಪ್ರದೇಶಗಳನ್ನು ಅಪಘಾತ ಪ್ರದೇಶವಾಗಿ ಗುರುತಿಸಿದ್ದಾರೆ. ಆದರೂ ಬ್ರಹ್ಮಾವರದ ಹೆದ್ದಾರಿ ಸಮಸ್ಯೆ ಗಳಿಗೆ ಹೆದ್ದಾರಿ ಪ್ರಾಧಿಕಾರ ಕುರುಡಾಗಿದೆ ಎಂದು ದೂರಿದ ಅವರು, ಹೀಗಾಗಿ ಇಂದಿನ ಸಭೆಯಲ್ಲಿ ಮುಂದಿನ ಹೋರಾಟದ ಕುರಿತಂತೆ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ರಮೇಶ ನಾಯ್ಕ, ರಿಕ್ಷಾ ಚಾಲಕರ ಗೌರವಾಧ್ಯಕ್ಷ ರಾಜು ಪೂಜಾರಿ, ಸಿ.ಐ.ಟಿ.ಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಸ್.ಎಂ. ಸಂಸ್ಥೆಯ ಅಲ್ವಾರಿಸ್ ಡಿಸಿಲ್ವ, ಪ್ರಮುಖರಾದ ಬಿ. ಭುಜಂಗ ಶೆಟ್ಟಿ, ಮಡಾಮಕ್ಕಿ ಶಶಿಧರ ಶೆಟ್ಟಿ, ದಯಾನಂದ ಶೆಟ್ಟಿ, ಪ್ರತೀಶ್ ಹೆಗ್ಡೆ, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಟೆಂಪೋ ಮಾಲಕರ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ರಾಜರಾಮ್ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನ ಚಂದ್ರಶೇಖರ ಹೆಗ್ಡೆ, ನಾಗರಿಕ ಸಮಿತಿಯ ಸದಾಶಿವ ಶೆಟ್ಟಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಶ್ರಮದಾನ ಮಾಡುತ್ತೇವೆ, ವಾಹನಗಳನ್ನು ನೀಡಿ!

ನಮ್ಮದು ದಶಕಗಳ ಹೋರಾಟ. ಜನರಿಗೆ ಅನುಕೂಲಕರವಾದ ಯಾವುದೇ ಬೆಳವಣಿಗೆಗಳು ಕಂಡು ಬಾರದ ಹಿನ್ನೆಲೆ ಊರಿನ ಪ್ರಮುಖರು, ರಿಕ್ಷಾ, ಟ್ಯಾಕ್ಸಿ ಯೂನಿಯನ್ ಸಭೆ ನಡೆಸಿ ಒಕ್ಕೊರಲ ತೀರ್ಮಾ ನಕ್ಕೆ ಬಂದಿದ್ದೇವೆ. ಆಗಸ್ಟ್ ತಿಂಗಳ ಅಂತ್ಯದೊಳಗೆ ಸಂಸದರಾಗಲಿ, ಜಿಲ್ಲಾಧಿಕಾರಿಯಾಗಲಿ ಎನ್‌ಎಚ್‌ಎಐ ಜೊತೆಗೆ ನಮ್ಮ ಸಮಿತಿಯ ಸಭೆ ಕರೆದು ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸುವ ಲಿಖಿತ ಭರವಸೆ ನೀಡಬೇಕು. ಇಲ್ಲವಾದಲ್ಲಿ ಸೆ.4ರಂದು ಬ್ರಹ್ಮಾವರ ಬಂದ್ ಕರೆ ನೀಡಲಾಗುತ್ತದೆ. ಇಲ್ಲಿನ ಫಾರ್ಚೂನ್ ಹೋಟೆಲ್ ಎದುರುಗಡೆಯಿಂದ ಧರ್ಮಾವರ ಆಡಿಟೋರಿಯಂವರೆಗೆ 8 ಗ್ರಾಮದ ಬಳಕೆ ದಾರರು ಶ್ರಮದಾನದ ಮೂಲಕ ರಸ್ತೆ ರಚನೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಹಕರಿಸು ತ್ತೇವೆ. ಕಾಮಗಾರಿಗೆ ಬೇಕಾದ ಜೆಸಿಬಿ, ಟಿಪ್ಪರ್, ಹಿಟಾಚಿ ಮೊದಲಾದ ಯಂತ್ರ, ವಾಹನಗಳನ್ನು ಒದಗಿಸಿ ಕೊಡುವಂತೆ ಉಡುಪಿ ಜಿಲ್ಲಾಧಿಕಾರಿಗೆ ಮನವಿ ನೀಡಲಿದ್ದೇವೆ.

-ಬಿ.ಗೋವಿಂದ ರಾಜ್ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿ ಸಂಚಾಲಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News