×
Ad

34ನೇ ದಿನಕ್ಕೆ ಕಾಲಿರಿಸಿದ ರೈತರ ಧರಣಿ: ಬೈಂದೂರು ಪ.ಪಂ. ಕಚೇರಿ ಎದುರು ಕೋಣಗಳನ್ನು ಕಟ್ಟಿ ಆಕ್ರೋಶ

Update: 2025-10-24 19:01 IST

ಬೈಂದೂರು, ಅ.24: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ರೈತ ಸಂಘ ಬೈಂದೂರು ವತಿಯಿಂದ ತಾಲೂಕು ಆಡಳಿತ ಸೌಧದ ಎದುರುಗಡೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 33 ದಿನವೂ ಮುಂದುವರೆಸಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಸರಕಾರದ ಸಮರ್ಪಕ ಸ್ಪಂಧನೆ ನೀಡುತ್ತಿಲ್ಲ ಎಂದು ಆಕ್ರೊಶಗೊಂಡ ರೈತರು ಹತ್ತಾರು ಜೊತೆ ಕೋಣಗಳೊಂದಿಗೆ ಬೈಂದೂರು ಪಟ್ಟಣ ಪಂಚಾಯತ್ ಮತ್ತು ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ಕೃಷಿ ಕಾರ್ಯ ಕೆಲಸ ಬಿಟ್ಟು ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾರೆ. ಸೌಜನ್ಯಕ್ಕಾದರು ಜಿಲ್ಲಾಮಟ್ಟದ ಅಧಿಕಾರಿಗಳು ಬೇಟಿ ಮಾಡಿಲ್ಲ. ರೈತ ಮುಖಂಡರ ಜೊತೆ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿಲ್ಲ. ಸರಕಾರದಿಂದ ನ್ಯಾಯ ಸಿಗುವ ನಿರೀಕ್ಷೆ ಇರುವ ಕಾರಣ ಶಾಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಇಲ್ಲದಿದ್ದರೆ ಸೋಮವಾರದಿಂದ ಉಗ್ರ ಪ್ರತಿಭಟನೆ ನಡೆಯಲಿದೆ ಎಂದರು.

ಜನಸಾಮಾನ್ಯವಾಗಿ ರೈತರು ಧರಣಿ ನಿರತರಾದರೆ ಆಡಳಿತ ಜನ ನಾಯಕರು, ಅಧಿಕಾರಿಗಳು ಸ್ಪಂಧಿಸದಿರುವ ಕುರಿತು ರೈತರು ಆಕ್ರೊಶ ವ್ಯಕ್ತಪಡಿಸಿದರು. ಶಾಸಕರು, ಮಾಜಿ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ರೈತರನ್ನು ಬೇಟಿ ಮಾಡಿ ಸರಕಾರದ ಗಮನಸೆಳೆಯಬೇಕು ಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದ್ದು ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಕಡತ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಸರಕಾರದಿಂದ ನ್ಯಾಯ ದೊರಕಿಸಿ ಕೊಡುವ ಭರವಸೆ ಇದೆ ಎಂದರು.

ಬೈಂದೂರು ತಾಲೂಕು ಕಂಬಳ ಸಮಿತಿ ಶುಕ್ರವಾರದ ಧರಣಿ ನೇತ್ರತ್ವ ವಹಿಸಿದ್ದರು. ಸುಮಾರು 10 ಜೊತೆ ಕೋಣಗಳ ಜೊತೆ ಬೈಂದೂರು ಪಟ್ಟಣ ವ್ಯಾಪ್ತಿ ಜಾಥಾ ನಡೆಸಿದರು.

ಪಟ್ಟಣ ಪಂಚಾಯತ್ ಹಾಗೂ ತಾಲೂಕು ಆಡಳಿತ ಸೌಧದ ಎದುರು ಕೋಣಗಳನ್ನು ಕಟ್ಟಿ ನ್ಯಾಯಕ್ಕಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸಸಿಹಿತ್ಲು, ಜಿಲ್ಲಾ ಸಮಿತಿ ಸದಸ್ಯವಿಕ್ರಮ ಪೂಜಾರಿ ಸಸಿಹಿತ್ಲು, ಕಂಬಳ ಸಮಿತಿ ಸದಸ್ಯರು ಹಾಗೂ ರೈತ ಮುಖಂಡರು ಹಾಜರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News