×
Ad

ಫೆ.5ರಂದು ಬಸ್ ಮಾಲಕರಿಂದ ಟೋಲ್ ಎದುರು ಧರಣಿ

Update: 2025-02-03 22:06 IST

ಉಡುಪಿ, ಫೆ.3: ಜಿಲ್ಲೆಯ ಸಾಸ್ತಾನ ಹಾಗೂ ಹೆಜಮಾಡಿಗಳಲ್ಲಿರುವ ಟೋಲ್ ಪ್ಲಾಜಾದಲ್ಲಿ ಕಾನೂನುಬಾಹಿರವಾಗಿ ಖಾಸಗಿ ಬಸ್‌ಗಳಿಂದ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರವಲ್ಲದೇ ಹೆಚ್ಚುವರಿಯಾಗಿ ಹಣವನ್ನು ಕಡಿತ ಮಾಡುವುದರ ವಿರುದ್ಧ ಬಸ್ ಮಾಲಕರು ಇದೇ ಫೆ.5ರಂದು ಎರಡೂ ಟೋಲ್ ಎದುರು ಧರಣಿ ನಡೆಸಲಿದ್ದಾರೆ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಬಸ್ ಮಾಲಕರ ಸಂಘ, ಕರಾವಳಿ ಬಸ್ ಮಾಲಕರ ಸಂಘ ಸೇರಿದಂತೆ ವಿವಿಧ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಈ ಧರಣಿ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ನಿರ್ದೇಶನದಂತೆ ಫಾಸ್ಟ್‌ಟ್ಯಾಗ್ ಕ್ಲಾಸಿಫಿಕೇಷನ್ ಪ್ರಕಾರ 7500ರಿಂದ 12000 ಕೆ.ಜಿ.ವಾಹನಗಳ ಟ್ಯಾಗ್(5)ರಡಿ ವಿಧಿಸುವ ಟೋಲ್ ಹಣ ನಮ್ಮ ಬಸ್‌ಗಳು ಟೋಲ್ ಪ್ಲಾಜಾ ದಾಟುವಾಗ ಕಡಿತಗೊಳ್ಳುತ್ತದೆ. ಆದರೆ ಟೋಲ್ ಪ್ಲಾಜಾದವರು ಆ ಬಳಿಕ ಕಾನೂನು ಬಾಹಿರವಾಗಿ ನಮ್ಮ ಟೋಲ್ ವಾಲೆಟ್‌ನಲ್ಲಿರುವ ಹಣವನ್ನು ಹೆಚ್ಚುವರಿ ಯಾಗಿ ಕಡಿತಗೊಳಿಸುತಿದ್ದಾರೆ ಎಂದು ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಆರೋಪಿಸಿದರು.

ಈ ಮೂಲಕ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗಳಲ್ಲಿ ಪ್ರತಿದಿನ ಸುಮಾರು 8ರಿಂದ 10 ಲಕ್ಷ ರೂ.ಗಳನ್ನು ಬಸ್ ಮಾಲಕರಿಂದ ಟೋಲ್‌ನವರು ಲೂಟಿ ಮಾಡುತಿದ್ದಾರೆ ಎಂದು ಸದಾನಂದ ಛಾತ್ರ ದೂರಿದರು.

ಈ ಬಗ್ಗೆ ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಎಸ್ಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಎಲ್ಲರಿಗೂ ಮನವಿ ಅರ್ಪಿಸಿ ಸರಿಪಡಿಸಿವಂತೆ ತಿಳಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಫೆ.5ರಂದು ಮಾಲಕರು ಟೋಲ್‌ಗಳ ಎದುರು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ವಸಂತ ಶೆಟ್ಟಿ, ಇಮ್ತಿಯಾಝ್ ಅಹ್ಮದ್, ಸಂದೀಪ್, ಇಮ್ರಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News