ಡಿ.5-6ರಂದು ಕೋಟದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ
ಕೋಟ, ನ.25: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಡುಪಿ ಜಿಲ್ಲಾ 16ನೇ ಸಾಹಿತ್ಯ ಸಮ್ಮೇಳನ ಕೋಟ ವಿವೇಕ ವಿದ್ಯಾಸಂಘದ ಸಹಕಾರದಲ್ಲಿ, ಕೋಟದ ವಿವೇಕ ವಿದ್ಯಾಲಯದ ಆವರಣದಲ್ಲಿ ಡಿ.5-6ರಂದು ಜರಗಲಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ತಿಳಿಸಿದ್ದಾರೆ.
ಕೋಟದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಪ್ರಯುಕ್ತ ಡಿ.5ರಂದು ಸಾಲಿ ಗ್ರಾಮ ಗುರುನರಸಿಂಹ ದೇಗುಲದಿಂದ ಕೋಟ ವಿವೇಕ ವಿದ್ಯಾಸಂಸ್ಥೆ ತನಕ ಪುರಮೆರವಣಿಗೆ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಸಮ್ಮೇಳನಕ್ಕೆ ಚಾಲನೆ ನೀಡಲಿರುವರು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪುಸ್ತಕ ಮಳಿಗೆಗೆ ಕೋಟ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಚಾಲನೆ ನೀಡಲಿರುವರು. ಅಪರಾಹ್ನ 2ಗಂಟೆಗೆ ಕವಿಗೋಷ್ಠಿ, 3ಗಂಟೆಗೆ ಕುಂದಾಪ್ರ ಭಾಷಿ ಕುರಿತು ಮನು ಹಂದಾಡಿಯವರಿಂದ ಗೋಷ್ಠಿ ಅನಂತರ ಶತಮಾನದ ಅಚ್ಚರಿ ಕೋಟ ಲಕ್ಷ್ಮೀ ನಾರಾಯಣ ಕಾರಂತ ಮತ್ತು ಆಡಳಿತದಲ್ಲಿ ಕನ್ನಡ ವಿಚಾರಗೋಷ್ಠಿ, ನಾಟಕ ಪ್ರದರ್ಶನ ನಡೆಯಲಿದೆ.
ಡಿ.6ರಂದು ಬೆಳಗ್ಗೆ 10ಗಂಟೆಗೆ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಒಂದಷ್ಟು ಹೊತ್ತು ಮಾತು-ಕತೆ, ಶಿಕ್ಷಣ, ಶಿಕ್ಷಕ -ವ್ಯವಸ್ಥೆ ವಿಚಾರಗೋಷ್ಠಿ, ಅಪರಾಹ್ನ 1.30ಕ್ಕೆ ಚಿಣ್ಣರ ಜಗುಲಿ ಬಹುವಿಧ ಗೋಷ್ಠಿ ಅನಂತರ ಯಕ್ಷಗಾನ ಪ್ರಸಂಗದ ಕುರಿತು ವಿಚಾರಗೋಷ್ಠಿ ಅಪರಾಹ್ನ 3ಕ್ಕೆ ಬಹಿರಂಗ ಅವೇಶನ, ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ, ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಜಿಲ್ಲಾ ಸಮ್ಮೇಳನದ ಆಮಂತ್ರಣವನ್ನು ವಿವೇಕ ವಿದ್ಯಾಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ರಾಮ ದೇವ ಐತಾಳ ಬಿಡುಗಡೆಗೊಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಸಾಪ ಪದಾಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ರಾಮಚಂದ್ರ ಐತಾಳ, ಮನೋಹರ ಪಿ., ಉಪೇಂದ್ರ ಸೋಮಯಾಜಿ, ಸುಜಯೀಂದ್ರ ಹಂದೆ, ಅಚ್ಯುತ್ ಪೂಜಾರಿ, ವಿವೇಕ ವಿದ್ಯಾಸಂಸ್ಥೆಯ ಪ್ರತಿನಿಗಳಾದ ಜಗದೀಶ್ ನಾವಡ, ಮಂಜುನಾಥ ಉಪಾಧ್ಯ, ಜಗದೀಶ್ ಹೊಳ್ಳ, ಭಾಸ್ಕರ ಆಚಾರ್ಯ, ವೆಂಕಟೇಶ್ ಉಡುಪ, ಸಂಜೀವ ಗುಂಡ್ಮಿ ಉಪಸ್ಥಿತರಿದ್ದರು.