×
Ad

ಅ.6ರಿಂದ ನೌಕಾ ಎನ್‌ಸಿಸಿ ಕೆಡೆಟ್‌ಗಳಿಂದ 15 ದಿನಗಳ ನೌಕಾಯಾನ

Update: 2025-10-03 21:19 IST

ಉಡುಪಿ, ಅ.3: ಕರ್ನಾಟಕ ಮತ್ತು ಗೋವಾದ 72 ಮಂದಿ ಆಯ್ದ ನೌಕಾ (ನೇವಲ್) ಎನ್‌ಸಿಸಿ ಕೆಡೆಟ್‌ಗಳು ಅ.6ರಿಂದ ಉಡುಪಿಯಲ್ಲಿ ಪ್ರಾರಂಭ ಗೊಳ್ಳುವ 15 ದಿನಗಳ ತರಬೇತಿ ಶಿಬಿರದಲ್ಲಿ ಕಠಿಣವಾದ ಹಾಗೂ ಹಲವು ಸವಾಲುಗಳನ್ನು ಒಡ್ಡುವ ನದಿ ಮತ್ತು ಸಾಗರ ನೌಕಾಯಾನ ಸಾಹಸಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ತರಬೇತಿ ಶಿಬಿರವು ಪ್ರತಿಷ್ಠಿತ ಅಖಿಲ ಭಾರತ ಸಮುದ್ರ ಯಾನ ದಂಡಯಾತ್ರೆ- ಮೆನು ಟ್ರೋಫಿಗೆ ಪೂರ್ವ ಸಿದ್ಧತಾ ಕಣವಾಗಿರುತ್ತದೆ.

ಉಡುಪಿ ಎನ್‌ಸಿಸಿಯ ನಂಬರ್ 6 ಕರ್ನಾಟಕ ನೇವಲ್ ಯುನಿಟ್ ಈ ತರಬೇತಿ ಶಿಬಿರವನ್ನು ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಮಾರ್ಗದರ್ಶನದಡಿ ಆಯೋಜಿಸುತ್ತಿದೆ. ಶಿಬಿರದ ನೇತೃತ್ವವನ್ನು ಮಂಗಳೂರು ವಿಭಾಗ ಮುಖ್ಯಸ್ಥ ಕರ್ನಲ್ ವಿರಾಜ್ ಕಾಮತ್ ವಹಿಸಲಿದ್ದಾರೆ. ನೌಕಾಯಾನ ಕಾರ್ಯಾಚರಣೆಯ ಮುಂದಾಳತ್ವವನ್ನು ಉಡುಪಿಯ ಕಮಾಂಡರ್ ಅಶ್ವಿನ್ ಎಂ.ರಾವ್ ವಹಿಸಲಿದ್ದಾರೆ.

15 ದಿನಗಳ ಕಾಲ ನಡೆಯುವ ಸವಾಲಿನ ನೌಕಾಯಾನ ದಂಡಯಾತ್ರೆಯು ವಿದ್ಯಾರ್ಥಿ ಕೆಡೆಟ್‌ನ ಕೌಶಲ್ಯ, ಸಹಿಷ್ಣುತೆ ಹಾಗೂ ತಂಡವಾಗಿ ಕಾರ್ಯನಿರ್ವಹಣೆಯ ಕುಶಲತೆಯನ್ನು ಪರೀಕ್ಷೆಗೊಡ್ಡುತ್ತದೆ.

15 ದಿನಗಳ ನೌಕಾಯಾನ ದಂಡಯಾತ್ರೆಗೆ ಹೊರಡುವ ಮುನ್ನ ಮೆನು ಕ್ಯಾಂಪ್ ಪೂರ್ವ ತರಬೇತಿ ಶಿಬಿರಕ್ಕೆ ಕಮಾಂಡರ್ ಅಶ್ವಿನಿ ಎಂ.ರಾವ್ ಅವರು ಉಡುಪಿಯ ಎಸ್‌ಆರ್‌ಎಸ್ ಕ್ಯಾಂಪಸ್‌ನಲ್ಲಿ ಅ.1ರಂದು ಚಾಲನೆ ನೀಡಿ ದ್ದರು. ಐದು ದಿನಗಳಲ್ಲಿ ಕೆಡೆಟ್‌ಗಳಿಗೆ ನೌಕಾಯಾನದ ವೇಳೆ ಬೋಟಿನ ನಿರ್ವಹಣೆ, ಸುರಕ್ಷತಾ ಸಾಧನಗಳ ಬಳಕೆ, ಬೋಟನ್ನು ಚಲಾಯಿಸುವ ತಂತ್ರಜ್ಞಾನದ ಕುರಿತು ಸಂಪೂರ್ಣ ಅರಿವು ಮೂಡಿಸಲಾಯಿತು.

ನೇವಲ್ ಎನ್‌ಸಿಸಿ ಯುನಿಟ್‌ನಲ್ಲಿ ಮೆನು ಟ್ರೋಫಿ ಎಂಬುದು ಅತ್ಯಧಿಕ ಗೌರವದ ಸಂಕೇತವಾಗಿದೆ. ಇದರಲ್ಲಿ ಗೆಲುವು ಸಾಧಿಸಿದ ತಂಡವನ್ನು ಪ್ರದಾನ ಮಂತ್ರಿಗಳು ಗುರುತಿಸಿ, ಪ್ರಜಾಪ್ರಭುತ್ವ ದಿನದ ಮೆರವಣಿಗೆಯಲ್ಲಿ ಸ್ಥಾನ ನೀಡುತ್ತಾರೆ. ಹೀಗಾಗಿ ಈ ದಂಡಯಾತ್ರೆ ಕೇವಲ ತರಬೇತಿ ಚಟುವಟಿಕೆ ಮಾತ್ರವಲ್ಲ, ಅದಕ್ಕೊಂದು ರಾಷ್ಟ್ರ ಮಟ್ಟದ ಗೌರವದ ಗುರುತೂ ಇದೆ.

ಹೀಗಾಗಿ ಇದೀಗ ಕರ್ನಾಟಕ ಮತ್ತು ಗೋವಾದ 72 ಮಂದಿ ನೇವಲ್ ಎನ್‌ಸಿಸಿ ಕೆಡೆಟ್‌ಗಳು ರಾಷ್ಟ್ರೀಯ ಮಟ್ಟದ ಕಠಿಣ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ ಎಂದು ಉಡುಪಿ ಎನ್‌ಸಿಸಿಯ ನಂ.6 ಕರ್ನಾಟಕ ನೇವಲ್ ಯುನಿಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News