×
Ad

ಮಾ.6-8: ನಾಡ್ಪಾಲು ಗ್ರಾಮೋತ್ಸವ, ನೇಮೋತ್ಸವ; ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ತಿಂಗಳೆ ಪ್ರಶಸ್ತಿ

Update: 2024-02-09 19:21 IST

ಉಡುಪಿ, ಫೆ.9: ಜಿಲ್ಲೆಯ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ವಿಶಿಷ್ಟ ವ್ಯಕ್ತಿತ್ವದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು 63ನೇ ತಿಂಗಳೆ ಸಾಹಿತ್ಯೋತ್ಸವದಲ್ಲಿ ‘ತಿಂಗಳೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ್ 8ರಂದು ತಿಂಗಳೆಯಲ್ಲಿ ನಡೆಯುವ 63ನೇ ತಿಂಗಳೆ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರೂ, ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಸ್ಥಾಪಕರೂ ಆದ ಬಿ.ಅಪ್ಪಣ್ಣ ಹೆಗ್ಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ತಿಂಗಳೆ ಪ್ರತಿಷ್ಠಾನದ ವತಿಯಿಂದ ನಡೆಯುವ 63ನೇ ಸಾಹಿತ್ಯೋತ್ಸವ, ಧರ್ಮದೈವಳ ನೇಮೋತ್ಸವ ಹಾಗೂ ನಾಡ್ಪಾಲು ಗ್ರಾಮೋತ್ಸವ ಮಾ.6ರಿಂದ 8ರವರೆಗೆ ತಿಂಗಳೆಯಲ್ಲಿ ನಡೆಯಲಿದೆ ಎಂದೂ ಅವರು ವಿವರಿಸಿದರು.

ಮಾ.8ರಂದು ರಾತ್ರಿ 8 ಗಂಟೆಗೆ ನಡೆಯುವ ತಿಂಗಳೆ ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ವಹಿಸಲಿದ್ದಾರೆ. ಈ ಬಾರಿಯ ಸೇವಾಭೂಷಣ ಪ್ರಶಸ್ತಿಯನ್ನು ಉಪ್ಪಳ- ಮುದ್ರಾಡಿಯ ಮಂಜುನಾಥ ಅಡಿಗರಿಗೆ ನೀಡಲಾಗುವುದು ಎಂದರು.

ಶಿವರಾತ್ರಿ ಪ್ರಯುಕ್ತ ಶಿವಪಾರಮ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ವೀಣಾ ಬನ್ನಂಜೆ ಅವರು ಚೆನ್ನ ಮಲ್ಲಿಕಾರ್ಜುನ ಕುರಿತು, ಬಾರಕೂರಿನ ಎನ್.ಆರ್.ದಾಮೋದರ ಶರ್ಮ ಶಿವೋಪಾಸನೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಕವಿ ಸಮಯ ದಲ್ಲಿ ಜ್ಯೋತಿ ಮಹಾದೇವ್, ಅಮೃತ ಕಡಿಯಾಳಿ, ಪ್ರಜ್ಞಾ ಮಾರ್ಪಳ್ಳಿ, ರೇವತಿ ನಾಡಿಗೇರ್ ಹಾಗೂ ರಮ್ಯ ಸೀತಾನದಿ ಅವರು ಕವನ ವಾಚಿಸಲಿದ್ದಾರೆ ಎಂದರು.

ಮಾ.6ರಂದು ನಾಡ್ಪಾಲು ಗ್ರಾಮೋತ್ಸವ ನಡೆಯಲಿದೆ. 9:00ಗಂಟೆಗೆ ಹೆಬ್ರಿ-ಚಾರದ ವಾದಿರಾಜ ಶೆಟ್ಟಿ ಅವರು ಗ್ರಾಮೋತ್ಸವವನ್ನು ಉದ್ಘಾಟಿ ಸುವರು. 9:30ರಿಂದ ಗ್ರಾಮೀಣ ಕ್ರೀಡೋತ್ಸವ ಹಾಗೂ ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕ್ರೀಡೋತ್ಸವದಲ್ಲಿ ಚೆನ್ನಮಣೆ, ಗೋಣಿಚೀಲ ಓಟ ಮುಂತಾದ ಗ್ರಾಮೀಣ ಕ್ರೀಡೆಗಳು ನಡೆದರೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗ್ರಾಮೀಣ ಜನಪದ ನೃತ್ಯ ಹಾಗೂ ಹಾಡುಗಳಿರುತ್ತವೆ. ಕೇವಲ ನಾಡ್ಪಾಲು ಗ್ರಾಮದ ಜನತೆಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದರು.

ತಿಂಗಳೆ ಶ್ರೀಮಹಾಕಾಲ-ಶಿವರಾಯ ದೈವಸ್ಥಾನದ ಧರ್ಮದೈವಗಳ ನೇಮೋತ್ಸವ ಮಾ.6ರಿಂದ 9ರವರೆಗೆ ನಡೆಯಲಿದೆ. ಮೊದಲ ದಿನ ಧರ್ಮರಸು ನೇಮ ಹಾಗೂ ಒಡ್ಮರಾಯ ದೈವದ ನೇಮ ನಡೆದರೆ, 7ರಂದು ಸಂಜೆ ಬ್ರಹ್ಮಬೈದರ್ಕಳ ಅಗಲು ಸೇವೆ ಹಾಗೂ ಕೊಡಿಮಣಿತ್ತಾಯ ಮತ್ತು ಕುಕ್ಕಿನಂತಾಯ ನೇಮವಿದೆ. 8ರಂದು ರಾತ್ರಿ ಶಿವರಾಮ ದೈವದ ನೇಮ, ಮಯಂದಾಲ ನೇಮ ನಡೆಯಲಿದೆ. 9ರಂದು ಮಾರಿಪೂಜೆ ನಡೆಯಲಿದೆ ಎಂದು ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದರು.

ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಕೋಶಾಧಿಕಾರಿ ಕೆಳಚಾವಡಿ ಪ್ರಕಾಶ ಶೆಟ್ಟಿ, ನಿರ್ದೇಶಕರಾದ ಕಿರಣ್‌ಕುಮಾರ್ ಬೈಲೂರು, ಸದಾನಂದ, ರಮೇಶ್ ಶೆಟ್ಟಿ ಹಾಗೂ ನಾಡ್ಪಾಲು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News