7ನೇ ವನ್ಯಜೀವಿ ಸಪ್ತಾಹ: ವಿದ್ಯಾರ್ಥಿಗಳಿಂದ ಜಾಥಾ
ಕಾರ್ಕಳ, ಅ.5: ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ವತಿಯಿಂದ 7ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಉಡುಪಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಕಾಶ್ ಕದಮ್, ಸತೀಶ್ ಎನ್., ಕಾರ್ಕಳ ಶ್ರೀಸುಂದರ ಪೂರಾಣಿಕ ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ರಾಯಿ, ಸಿದ್ದಾಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ.ದಿನೇಶ್, ಕಾರ್ಕಳ ಕುದುರೆಮುಖ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಗುರು ಭಟ್ ಉಪಸ್ಥಿತರಿದ್ದರು.
ಕುದುರೆಮುಖ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಕಳ ಕಚೇರಿ ಆವರಣದಿಂದ ಆರಂಭ ಗೊಂಡ ಜಾಥಾವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಕಚೇರಿ, ಬಂಡೀಮಠ, ಶ್ರೀವೆಂಕಟರಮಣ ದೇವಸ್ಥಾನ, ಕಾರ್ಕಳ ಬಸ್ ನಿಲ್ದಾಣ, ಶ್ರೀಅನಂತಶಯನ ದೇವಸ್ಥಾನದ ಮಾರ್ಗವಾಗಿ ಕೋರ್ಟ್ ರಸ್ತೆಯಿಂದ ಸಾಗಿ ಶ್ರೀಸುಂದರ ಪೂರಾಣಿಕ ಪ್ರೌಢ ಶಾಲೆಯಲ್ಲಿ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ವಿದ್ಯಾಸಂಸ್ಥೆ, ಮೂಡಬಿದ್ರೆ ಇವರ ಡೋಲುಕುಣಿತ ಹಾಗೂ ನಾಸಿಕ್ ಡೋಲು ಪ್ರಮುಖ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಪೆರ್ವಾಜೆ ಶ್ರೀಸುಂದರ ಪೂರಾಣಿಕ ಪ್ರೌಢ ಶಾಲೆ, ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು, ಶ್ರೀಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್, ಕ್ರಿಯೇಟಿವ್ ವಿದ್ಯಾ ಸಂಸ್ಥೆ, ಜ್ಞಾನಸುಧಾ ವಿದ್ಯಾ ಸಂಸ್ಥೆ, ಶ್ರೀಮಂಜುನಾಥ ಮೆಮೋರಿಯಲ್ ಸ್ಮಾರಕ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು.
ಈ ಜಾಥಾದ ಮುಖಾಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಜನಸಾಮಾನ್ಯರಲ್ಲಿ ಅರಣ್ಯಗಳ ಹಾಗೂ ವನ್ಯಜೀವಿಗಳ ಪ್ರಾಮುಖ್ಯತೆಯ ಬಗ್ಗೆ, ಪರಿಸರದ ಸಮತೋಲನವನ್ನು ಕಾಪಾಡಲು, ಜೀವವೈವಿಧ್ಯತೆಯ ಪ್ರಾಮುಖ್ಯತೆಯಿಂದ ಪರಿಸರವನ್ನು ಒಮ್ಮನಸ್ಸಿನಿಂದ ಕಾಪಾಡುತ್ತಾ, ಸುಸ್ಥಿರ ಜೀವನವನ್ನು ನಡೆಸಲು ನಾವೆಲ್ಲರೂ ಅನುಸರಿಸಬೇಕಾದಂತಹ ಕ್ರಮಗಳ ಬಗ್ಗೆ ಫಲಕ, ಪೋಸ್ಟರ್, ಘೋಷಣೆಗಳೊಂದಿಗೆ ಜಾಥಾವು ಸಾಗಿತು.
ಮುಂದಿನ ಪೀಳಿಗೆಗಳಾದ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅರಣ್ಯ ಹಾಗೂ ಜೀವವೈವಿಧ್ಯತೆಯ ರಕ್ಷಣೆ ಹಾಗೂ ಪ್ರಾಮುಖ್ಯತೆಯ ಅರಿವನ್ನು ಈ ಜಾಥಾದ ಮೂಲಕ ಮೂಡಿಸಲಾಯಿತು.