ಎಂ.ಟಿ.ವಿ.ಗೆ 90: ಮಣಿಪಾಲದಲ್ಲಿ ಜು.30ರಂದು ‘ಎಂಟಿಸಾಯಂ’
ವಾಸುದೇವನ್ ನಾಯರ್
ಮಣಿಪಾಲ, ಜು.28: ಮಲಯಾಳಂ ಭಾಷೆಯ ಮೇರು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಎಂ.ಟಿ.ವಾಸುದೇವನ್ ನಾಯರ್ 90ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಸಾಹಿತ್ಯ ಹಾಗೂ ಸಿನೆಮಾರಂಗದಲ್ಲಿ ಅವರ ಸಾಧನೆಯನ್ನು ಅವಲೋಕಿಸುವ ‘ಎಂ.ಟಿ. ಸಾಯಂ’ ಸಾಹಿತ್ಯಿಕ ಸಂಜೆ ಕಾರ್ಯ ಕ್ರಮವೊಂದನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್ (ಜಿಸಿಪಿಎಎಸ್) ಹಾಗೂ ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್‌ನ ಸಹೃದಯ ಸಂಗಮಮ್ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದು ಜು.30ರ ರವಿವಾರ ಅಪರಾಹ್ನ 3:00 ಗಂಟೆಯಿಂದ ಮಣಿಪಾಲದ ಪ್ಲಾನೆಟೋರಿಯಂ ಸಭಾಂಗಣದಲ್ಲಿ ನಡೆಯಲಿದೆ.
ಖ್ಯಾತ ಲೇಖಕಿ ವೈದೇಹಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಭಾಷಾ ವಿದ್ವಾಂಸ ಪ್ರೊ.ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಾಷಾ ತಜ್ಞ ಹಾಗೂ ಖ್ಯಾತ ಭಾಷಾಂತರಕಾರ ಪ್ರೊ.ಎನ್.ಟಿ.ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗ ವಹಿಸಲಿದ್ದಾರೆ. ಕೇರಳ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ವಿ.ಸಿ.ಬಿನೇಶ್ ಅವರು ವಿಶೇಷ ಅತಿಥಿಗಳಾಗಿರುವರು.
ನಂತರ ನಡೆಯುವ ಸಾಹಿತ್ಯಗೋಷ್ಠಿಯಲ್ಲಿ ಡಾ.ಪಾರ್ವತಿ ಐತಾಳ್, ಡಾ.ಅಶೋಕನ್ ನಂಬಿಯಾರ್, ಪ್ರೊ.ಮೋಹನ್ ಕುಮಾರ್, ಡಾ.ರವೀಂದ್ರನಾಥನ್, ಡಾ.ರೇಸ್ಮಿ ಭಾಸ್ಕರನ್, ಪ್ರೊ. ವರದೇಶ್ ಹಿರೇಗಂಗೆ ಮಾತನಾಡಲಿದ್ದಾರೆ. ಬಳಿಕ ಚಲನಚಿತ್ರ ಪ್ರದರ್ಶನ ನಡೆಯಲಿದ್ದು, ಪ್ರೊ. ಫಣಿರಾಜ್ ಇದನ್ನು ಸಂಯೋಜಿಸಲಿದ್ದಾರೆ.