900 ಎಂಡೋ ಸಂತ್ರಸ್ತ ಹೆಣ್ಣುಮಕ್ಕಳಲ್ಲಿ ಶೇ.80ಕ್ಕೂ ಅಧಿಕ ಅಂಗವಿಕಲತೆ: ಡಾ.ಶಾನುಭಾಗ್
ಉಡುಪಿ, ಜ.12: ಕಳೆದ ನಾಲ್ಕು ದಶಕಗಳಿಂದ ಕರಾವಳಿ ಕರ್ನಾಟಕದಾದ್ಯಂತ ನಡೆದಿರುವ ಎಂಡೋಸಲ್ಫಾನ್ ದುರಂತ ದಲ್ಲಿ ಅಂಗವಿಕಲ ಹಾಗೂ ವಿಶೇಷಚೇತನರಾಗಿ ಬಳಲುತ್ತಿರುವ ಹೆಣ್ಣು ಮಕ್ಕಳಿಗಾಗಿ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ರುವ ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಆಶ್ರಮಕ್ಕೆ ಶಂಕುಸ್ಥಾಪನೆಯನ್ನು ರವಿವಾರ ನೆರವೇರಿಸಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಪಾಲನಾ ಕೇಂದ್ರಗಳು ಸ್ಥಾಪಿತ ವಾಗಿದ್ದರೂ, ಉಡುಪಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಇದೀಗ ಹೊಸಬೆಳಕು ಸಂಸ್ಥೆಯ ಈ ಆಶ್ರಮದ ನಿರ್ವಹಣೆಗಾಗಿ ಸರಕಾರದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ಮನೋವೈದ್ಯ ಡಾ.ಪಿ.ವಿ ಭಂಡಾರಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಹೊಸಬೆಳಕು ಸಂಸ್ಥೆಯ ಚಟುವಟಿಕೆಗಳು ಈಗಾಗಲೇ ಸಾರ್ವಜನಿಕರ ಗಮನ ಸೆಳೆದಿದ್ದು, ಇದೀಗ 180 ಅಸಹಾಯಕರ ಆಶ್ರಯ ಧಾಮವಾಗಿದೆ. ಅವಶ್ಯ ವಿರುವ ಆಶ್ರಮವಾಸಿಗಳಿಗೆ ಸೂಕ್ತ ಮನೋಚಿಕಿತ್ಸೆ ನೀಡಲು ಬಾಳಿಗಾ ಆಸ್ಪತ್ರೆಯ ವತಿಯಿಂದ ವೈದ್ಯರನ್ನು ನಿಯೋಜಿಸಲಾಗುವುದು ಎಂದರು.
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಮಾತನಾಡಿ, ಈ ದುರಂತದಲ್ಲಿ ಸುಮಾರು 3000 ಮಂದಿ ಸಂತ್ರಸ್ತರು ಈಗಾಗಲೇ ಕ್ಯಾನ್ಸರ್, ಎಪಿಲೆಪ್ಸಿ ಮುಂತಾದ ರೋಗಗಳಿಂದ ನರಳಿ ಮರಣ ಹೊಂದಿದ್ದಾರೆ. ಬದುಕುಳಿದ 8600 ಪೀಡಿತರಲ್ಲಿ 4000ಕ್ಕೂ ಅಧಿಕ ಬಾಧಿತರು ಹೆಣ್ಣುಮಕ್ಕಳಾಗಿದ್ದಾರೆ. ಇವರಲ್ಲಿ ಸುಮಾರು 900 ಮಂದಿಯಷ್ಟು ಶೇ.80ಕ್ಕೂ ಅಧಿಕ ಅಂಗವಿಕಲತೆಯುಳ್ಳವರಾಗಿದ್ದಾರೆ ಎಂದರು.
ಇದರಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಸುಮಾರು 10ರಿಂದ 40ವರ್ಷದೊಳಗಿ ನವರು. ಈ ಸಂತ್ರಸ್ತರ ಪಾಲನೆ ಪೋಷಣೆ ಒಂದೇ ಕೋಣೆಯಲ್ಲಿ ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊಸಬೆಳಕು ಆಶ್ರಮದ ಪ್ರಯತ್ನವನ್ನು ಬೆಂಬಲಿಸುವುದು ನಾಗರಿಕರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಎಂಡೋಸಲ್ಫಾನ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಆರೋಗ್ಯ ಇಲಾಖೆಯ ಯೋಜನಾಧಿಕಾರಿ ಸತೀಶ್, ಸಂಸ್ಥೆಯ ಮುಖ್ಯಸ್ಥೆ ತನುಲಾ ತರುಣ, ಯು.ಎಸ್.ನಾಯಕ್ ಮೊಮೋರಿಯಲ್ ಟ್ರಸ್ಟ್‌ನ ಸುರೇಶ್ ನಾಯಕ್, ಎಂಡೋಸಲ್ಫಾನ್ ಕಾರ್ಯಕರ್ತರಾದ ಸಂಜೀವ ಕಬಕ, ಪ್ರಮೀಳಾ ಹರ್ಷ ಹಾಗೂ ದಿನೇಶ್ ಭಟ್ ಉಪಸ್ಥಿತರಿದ್ದರು.
‘ಎಂಡೋಸಲ್ಫಾನ್ ಅಷ್ಟೇ ರೋಗಕಾರಕವಾಗಿರುವ ಹಲವಾರು ಕೀಟನಾಶಕ ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇವುಗಳ ಬಳಕೆಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಹಾಗೂ ಕಾನೂನು ಹೋರಾಟ ನಡೆಸಲು ಪ್ರತಿಷ್ಠಾನ ಬದ್ಧವಾಗಿದೆ’
-ಡಾ.ರವೀಂದ್ರನಾಥ್ ಶಾನುಭಾಗ್
150 ಎಂಡೋ ಸಂತ್ರಸ್ತರಿಗೆ ಅವಕಾಶ
ಸಾಕಷ್ಟು ಮಂದಿ ಎಂಡೋ ಸಂತ್ರಸ್ತರು ಹಾಸಿಗೆ ಬಿಟ್ಟು ಏಳಲು ಅಶಕ್ತರಾಗಿದ್ದಾರೆ. ಅವರ ಹೆತ್ತವರು ಜೀವಂತ ಇರುವ ತನಕ ತಮ್ಮ ಮಕ್ಕಳ ಪೋಷಣೆಯನ್ನು ಮಾಡುತ್ತಿದ್ದರು. ಇದೀಗ ಕೆಲವರು ಹೆತ್ತವರನ್ನು ಕಳೆದು ಕೊಂಡಿದ್ದಾರೆ. ಅಸಹಾಯಕ ಪರಿಸ್ಥತಿಯಲ್ಲಿರುವ ಒಟ್ಟು 150 ಎಂಡೋ ಸಂತ್ರಸ್ತರನ್ನು ಈ ಆಶ್ರಮಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಹೊಸಬೆಳಕು ಸಂಸ್ಥೆಯ ಮುಖ್ಯಸ್ಥೆ ತನುಲಾ ತರುಣ ತಿಳಿಸಿದರು.
ಮೂರು ಮಹಡಿಯ ಈ ಪ್ರಸ್ತಾವಿತ ಕಟ್ಟಡದ ಮೊದಲ ಹಂತದ ಕಾಮಗಾರಿ ಇದೇ ವರ್ಷದ ಜೂನ್ ತಿಂಗಳಲ್ಲಿ ಮುಗಿಸುವ ಸಾಧ್ಯತೆಯಿದ್ದು, ಆಗ 50 ಸಂತ್ರಸ್ತರನ್ನು ಸೇರಿಸಿಕೊಳ್ಳಲಾಗುವುದು. ಅನಂತರ ಸುಮಾರು ಒಂದು ವರ್ಷದೊಳಗೆ ಮೊದಲನೇ ಮಹಡಿ ಮತ್ತು ಎರಡನೇ ಮಹಡಿಯ ಕಾಮಗಾರಿಯನ್ನೂ ಮುಗಿಸಲಾಗುವುದು ಎಂದು ಅವರು ಹೇಳಿದರು.