×
Ad

ಅ.14: ಮಿಷನ್ ಆಸ್ಪತ್ರೆಯಲ್ಲಿ ಉಪಶಾಮಕ ಆರೈಕೆ ದಿನಾಚರಣೆ

Update: 2023-10-13 18:17 IST

ಉಡುಪಿ, ಅ.13: ಉಡುಪಿಯಲ್ಲಿ ಕಳೆದೊಂದು ಶತಮಾನದಿಂದ ಜನತೆಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ವತಿಯಿಂದ ಜಾಗತಿಕ ಸಹಾನುಭೂತಿ (ಹಾಸ್ಪೈಸ್) ಮತ್ತು ಉಪಶಮಕ (ಪಲ್ಲಿಟೇವ್) ಆರೈಕಾ ದಿನಾಚರಣೆಯನ್ನು ಅ.14ರ ಸಂಜೆ 4:00ಗಂಟೆಗೆ ಆಚರಿಸಲಾಗುವುದು ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಹಾನುಭೂತಿಯ ಸಮುದಾಯಗಳು ಉಪಶಾಮಕ ಆರೈಕೆಗಾಗಿ ಒಂದಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ ಈ ದಿನಾಚರಣೆಯನ್ನು ಆಸ್ಪತ್ರೆಯ ಅಂಗಸಂಸ್ಥೆ ಯಾದ ಉಪ ಶಾಮಕ ಆರೈಕೆ ಕೇಂದ್ರ ‘ವಾತ್ಸಲ್ಯ’ ಘಟಕದ ವಠಾರದಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಗುಣಪಡಿಸಲು ಸಾಧ್ಯವಿಲ್ಲದ ಹಾಗೂ ದೀರ್ಘಕಾಲಿಕ ನೋವು ಅನುಭವಿ ಸುತ್ತಿರುವ ಕ್ಯಾನ್ಸರ್ ಸೇರಿದಂತೆ ಇತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನಿರ್ವಹಣೆಯಲ್ಲಿ ಉಪಶಾಮಕ ಆರೈಕೆ ಪಾತ್ರ ಮಹತ್ವದ್ದಾ ಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಲಭ್ಯವಿರುವ ವಿವಿಧ ಆಯ್ಕೆಗಳ ಕುರಿತು ಸಾರ್ವಜನಿಕರಿಗೆ ನಾಳೆ ಅರಿವು ಮತ್ತು ಮಾಹಿತಿ ನೀಡಲಾಗುತ್ತದೆ ಎಂದವರು ವಿವರಿಸಿದರು.

ಮಿಷನ್ ಆಸ್ಪತ್ರೆಯ ಕಳೆದ ಎಪ್ರಿಲ್ ತಿಂಗಳಲ್ಲಿ ಉದ್ಘಾಟನೆಗೊಂಡ ‘ವಾತ್ಸಲ್ಯ’ ಕೇಂದ್ರದಲ್ಲಿ ಕ್ಯಾನ್ಸರ್, ಕಿಡ್ನಿವೈಫಲ್ಯ, ವೃದ್ಧಾಪ್ಯದ ವಯೋಸಹಜ ಕಾಯಿಲೆ, ಪ್ಯಾರಲಿಸಿಸ್‌ನಿಂದ ನರಳುವ 25 ಮಂದಿ ರೋಗಿಗಳಿಗೆ ಆರೈಕೆ ನೀಡಲಾಗುತ್ತಿದೆ. ಇದಕ್ಕಾಗಿಯೇ ವಿಶೇಷ ತರಬೇತಿ ಪಡೆದ ನರ್ಸ್‌ಗಳು ಇಲ್ಲಿ ಸೇವೆ ಸಲ್ಲಿಸುತಿದ್ದಾರೆ ಎಂದು ಡಾ.ಜತ್ತನ್ನ ತಿಳಿಸಿದರು.

ಉಪಶಾಮಕ ಆರೈಕೆಯು ಮಾರಣಾಂತಿಕ ಕಾಯಿಲೆಯಿಂದ ಮತ್ತು ಮರಣವನ್ನು ಎದುರಿಸುತ್ತಿರುವ ರೋಗಿಗಳ ಜೀವನ ಮಟ್ಟವನ್ನು ಸುಧಾರಿಸುವ, ಅವರ ಕುಟುಂಬಿಕರಿಗೆ ಸಾಯುವ ಹಂತದಲ್ಲಿರುವ ರೋಗಿಗಳ ಆರೋಗ್ಯ ಸೇವೆ, ಅರೈಕೆ ಹಾಗೂ ಯೋಗಕ್ಷೇಮವನ್ನು ಚಿಕಿತ್ಸೆಯೊಂದಿಗೆ ನೋಡಿಕೊಳ್ಳುವ ವ್ಯವಸ್ಥೆಯಾಗಿದೆ ಎಂದರು.

ಮನುಷ್ಯ ಜೀವಿತಾವಧಿ ಈಗ 70+ ಆಗಿರುವ ಹಿನ್ನೆಲೆಯಲ್ಲಿ ವಯಸ್ಸಾದವರ ಜನಸಂಖ್ಯೆ ಹೆಚ್ಚಳದಿಂದ ಕ್ಯಾನ್ಸರ್ ಹಾಗೂ ಇತರ ವಿಷಮ ರೋಗಗಳಿಂದ ಪೀಡತರಾಗುವ ಜನರ ಸಂಖ್ಯೆಯೂ ಹೆಚ್ಚಿದ್ದು, ಇಂಥವರಿಗೆ ಉಪಶಾಮಕ ಆರೈಕೆ ಅಗತ್ಯವೆನಿಸಿದೆ. ಹೀಗಾಗಿ ಈ ಕುರಿತ ಮಾಹಿತಿ ಕಾರ್ಯಕ್ರಮವನ್ನು ಬ್ರಹ್ಮಾವರದ ಜಯಂಟ್ಸ್ ಇಂಟರ್‌ನೇಷನಲ್‌ನ ಸಹಯೋಗದೊಂದಿಗೆ ನಾಳೆ ಆಯೋಜಿಸಲಾಗಿದೆ ಎಂದರು.

ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಹಿರಿಯ ನಾಗರಿಕರಿಗಾಗಿ ‘ಸಹಜೀವನ’ ಹಿರಿಯ ನಾಗರಿಕರ ಆರೈಕಾ ಕೇಂದ್ರ, ‘ಕರುಣಾಲಯ’ ವಯೋ ಸಂಬಂಧಿ ಸಮಸ್ಯೆಗಳಿಂದ ಬಳಲುವವರ ಚಿಕಿತ್ಸಾ ಕೇಂದ್ರ ಹಾಗೂ ‘ವಾತ್ಸಲ್ಯ’ ಉಪಶಾಮಕ ಕೇಂದ್ರವನ್ನು ನಡೆಸುತ್ತಿದೆ ಎಂದು ಡಾ.ಸುಶೀಲ್ ಜತ್ತನ್ನ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ದೀನಾ ಪ್ರಭಾವತಿ, ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಗಣೇಶ ಕಾಮತ್, ಸಮುದಾಯ ಘಟಕ ಮುಖ್ಯಸ್ಥ ರೋಹಿ ರತ್ನಾಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News