ರಾಜ್ಯದ 68 ಕಾಲೇಜುಗಳಲ್ಲಿ ಎಇಡಿಪಿ ಕೋರ್ಸ್: ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್
ಬಾರಕೂರು ಕಾಲೇಜಿನಲ್ಲಿ ನೂತನ ಸಭಾಂಗಣಕ್ಕೆ ಶಿಲಾನ್ಯಾಸ
ಬಾರಕೂರು, ಅ.18: ಇಂದು ಉನ್ನತ ಶಿಕ್ಷಣದ ದಿಕ್ಕು ಬದಲಾಗುತ್ತಿದೆ. ಉದ್ಯೋಗಾಧಾರಿತ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ರಾಜ್ಯದ 45 ಕಾಲೇಜುಗಳಲ್ಲಿ ಪ್ರಾರಂಭಿಸಲಾದ ಎಇಡಿಪಿ (ಅಪ್ರೆಂಟಿಸ್‌ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್) ಕೋರ್ಸ್‌ಗಳನ್ನು ಈ ವರ್ಷ 68 ಕಾಲೇಜುಗಳಿಗೆ ವಿಸ್ತರಿಸಲಾ ಗಿದೆ. ಬೇಡಿಕೆ ಯನ್ನು ನೋಡಿಕೊಂಡು ಮುಂದೆ ಇನ್ನಷ್ಟು ಕಾಲೇಜುಗಳಿಗೆ ಅದನ್ನು ವಿಸ್ತರಿಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಬ್ರಹ್ಮಾವರ ತಾಲೂಕು ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನೇಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸುಮಾರು ಒಂದು ಕೋಟಿ ರೂ.ವೆಚ್ಟದಲ್ಲಿ ನಿರ್ಮಾಣ ಗೊಳ್ಳುವ ಕಾಲೇಜಿನ ನೂತನ ಸಭಾಂಗಣಕ್ಕೆ ಕಾಲೇಜು ಆವರಣದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.
ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕಲಾ ಹಾಗೂ ವಿಜ್ಞಾನ ವಿಭಾಗಗಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಕೇವಲ ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಇಡಿಪಿಯಲ್ಲಿ ಬಿ.ಕಾಂನಲ್ಲಿ ನಾಲ್ಕು ಹೊಸ ಕೋರ್ಸ್ -ಬಿಕಾಂ ರಿಟೈಲ್, ಬಿಕಾಂ ಲಾಜಿಸ್ಟಿಕ್, ಬಿಕಾಂ ಇ-ಕಾಮರ್ಸ್ ಹಾಗೂ ಬಿಕಾಂ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸ್- ಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಇದರಲ್ಲಿ ವಿದ್ಯಾರ್ಥಿಗಳಿಗೆ ಐದು ಮತ್ತು ಆರನೇ ಸೆಮಿಸ್ಟರ್‌ಗಳಲ್ಲಿ ಉದ್ಯೋಗಾಧಾರಿತ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದ್ದು, ಕ್ರೋಮಾ ಹಾಗೂ ರಿಲಯನ್ಸ್ ಮೂಲಕ ಪ್ರತಿ ತಿಂಗಳು 8,000ರೂ.ಸ್ಟೈಪೆಂಡ್ ನೀಡಲಾಗು ತ್ತಿದೆ. ತರಬೇತಿ ಆನ್‌ಲೈನ್ ಮೂಲಕವೂ ಸಿಗುತ್ತಿದೆ ಎಂದು ಡಾ.ಸುಧಾಕರ್ ವಿವರಿಸಿದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗು ತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಾಧಾರಿತ ಕೋರ್ಸ್ ಗಳನ್ನು ಪರಿಚಯಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.
ಕೋವಿಡ್ -19ರ ಸಂದರ್ಭದಲ್ಲಿ ನಮ್ಮ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗಿದ್ದು, 2023ರಲ್ಲಿ ತಾನು ಉನ್ನತ ಶಿಕ್ಷಣ ಸಚಿವನಾದ ಬಳಿಕ ರಾಜ್ಯಾದ್ಯಂತ ವಿವಿ ವೇಳಾಪಟ್ಟಿಯಲ್ಲಿ ಸಮಾನತೆಯನ್ನು ತಂದು ಅದನ್ನು ಅನುಷ್ಠಾನ ಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದ ಡಾ.ಸುಧಾಕರ್, 2024-25ನೇ ಸಾಲಿನ ವೇಳಾಪಟ್ಟಿಯನ್ನು ಅಕ್ಟೋಬರ್ -ನವೆಂಬರ್ ನಲ್ಲೆ ಪ್ರಕಟಣೆ ಮಾಡುವ ಕಾರ್ಯ ನಡೆದಿದೆ. ಸಿಇಟಿಯಿಂದ ಹಿಡಿದು ಕಾಲೇಜುಗಳ ಸಂಯೋಜನೆ ಸೇರಿದಂತೆ ಎಲ್ಲಾ ವೇಳಾಪಟ್ಟಿಗಳು ಸಮಯಕ್ಕೆ ಸರಿಯಾಗಿ ನಡೆಯುವಂತೆ ನೋಡಲಾಗುತ್ತಿದೆ ಎಂದರು.
ಸರಕಾರಿ ಕಾಲೇಜುಗಳಲ್ಲಿ ಈ ಬಾರಿ ಅತಿಥಿ ಉಪನ್ಯಾಸಕರ ಸಮಸ್ಯೆ ಉಂಟಾಗಿರುವ ಬಗ್ಗೆ ವಿವರಿಸಿದ ಸಚಿವರು, 1,242 ಸಹಾಯಕ ಉಪನ್ಯಾಸಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಯುಜಿಸಿ ಮಾನ್ಯತೆ ಹೊಂದಿದ ಮತ್ತು ಹೊಂದಿಲ್ಲದ ಬಗ್ಗೆ ನ್ಯಾಯಾಲಯದ ಕಾನೂನು ತೊಡಕು ಗಳಿದ್ದು, ಮೊನ್ನೆಯಷ್ಟೇ ತೀರ್ಪು ಹೊರ ಬಂದಿದೆ. 10-15 ವರ್ಷದಿಂದ ಅತಿಥಿ ಉಪನ್ಯಾಸಕರಾಗಿದ್ದವರು ಹೊರಗುಳಿಯುವ ಸಮಸ್ಯೆ ತಲೆದೋರಿದ್ದು, ಮಾನವೀಯ ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳ ಬೇಕಾಗಿದೆ ಎಂದರು.
ಇಡೀ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ವೇಳಾಪಟ್ಟಿಯನ್ನು ಏಕಕಾಲದಲ್ಲಿ ಪ್ರಕಟಿಸುವ ಕಾರ್ಯ ಪ್ರಗತಿ ಯಲ್ಲಿದೆ. ಇದು ಹಂತ ಹಂತ ವಾಗಿ ಸುಧಾರಣೆಯಾಗುತ್ತಿದೆ. ಇದರೊಂದಿಗೆ ರಾಜ್ಯದ ಎಲ್ಲ ಸರಕಾರಿ ಕಾಲೇಜುಗಳಿಗೆ ಹೊಸ ರೂಪ ನೀಡಲಾಗುವುದು. ಕಾಲೇಜು ಕಟ್ಟಡ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಂಡು ನೀಡಲಾದ ಅನುದಾನವನ್ನು ಆದ್ಯತೆ ಮೇರೆಗೆ ಬಳಸಿಕೊಳ್ಳಬೇಕು. ಭವಿಷ್ಯದ ಚಿಂತನೆಯನ್ನು ಗಮನದಲ್ಲಿಟ್ಟು ಕೊಂಡು ಬಹು ಮಹಡಿ ಕಟ್ಟಡಗಳ ವಿನ್ಯಾಸಗಳನ್ನು ರೂಪಿಸಬೇಕಾಗಿದೆ ಎಂದರು.
ಒಂದು ಕಾಲದಲ್ಲಿ 1,700 ವಿದ್ಯಾರ್ಥಿಗಳು ಕಲಿಯುತಿದ್ದ ಈ ಕಾಲೇಜಿ ನಲ್ಲಿ ಈಗ 500ರಷ್ಟು ಮಾತ್ರ ವಿದ್ಯಾರ್ಥಿ ಗಳಿರುವುದು ನೋವಿನ ಸಂಗತಿ. ಇದನ್ನು ಶೀಘ್ರದಲ್ಲೇ ಒಂದು ಸಾವಿರದ ಗಡಿ ದಾಟುವಂತೆ ನೋಡಿಕೊಳ್ಳಲು ಸೂಚಿಸಿದ ಅವರು ಇದಕ್ಕೆ ಬೇಕಾದ ಎಲ್ಲಾ ಸಹಾಯ ದೊರಕಿಸಿಕೊಡುವುದಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರಿ ಕಾಲೇಜುಗಳಿಗೆ ಬೇಕಾದ ಮೂಲಭೂತ ಸೌಕರ್ಯ ಸಕಾಲದಲ್ಲಿ ದೊರೆತರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ. ಈಗ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳು ಮಾತ್ರ ಸರಕಾರಿ ಕಾಲೇಜುಗಳಿಗೆ ದಾಖಲಾಗುತ್ತಾರೆ. ಜಿಲ್ಲೆಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕ್ಕಾಗಿ ಬರುತ್ತಿರುತ್ತಾರೆ. ಜಿಲ್ಲೆಯಲ್ಲಿ ನಿಗದಿತ ಸಂಖ್ಯೆಯ ಹಾಸ್ಟೆಲ್‌ಗಳಿಲ್ಲದೇ ಅವರು ತೊಂದರೆ ಅನುಭವಿಸುತಿದ್ದಾರೆ ಎಂದರು.
ಹಾಸ್ಟೆಲ್‌ಗಳ ಅವಕಾಶವಿಲ್ಲದೇ ವಿದ್ಯಾರ್ಥಿಗಳು ಊರಿನ ಮರಳುವ ಸಂದರ್ಭವೂ ಇದೆ. ಹೀಗಾಗಿ ಕುಂದಾಪುರ ವ್ಯಾಪ್ತಿಯಲ್ಲಿ 2 ಹಾಸ್ಟೆಲ್ ನಿರ್ಮಿಸಲು ಸರಕಾರ ಕೂಡಲೇ ಗಮನಹರಿಸಬೇಕು ಎಂದರಲ್ಲದೇ ಅತಿಥಿ ಉಪನ್ಯಾಸಕರ ಕೊರತೆಯನ್ನು ನೀಗಿಸಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಬಾರಕೂರು ಗ್ರಾಪಂ ಅಧ್ಯಕ್ಷ ಬಿ. ಶಾಂತಾ ರಾಮ ಶೆಟ್ಟಿ, ಹನೇಹಳ್ಳಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಕೆ.ಆರ್ ಕವಿತಾ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಘುರಾಜ್, ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದಲ್ಲಿ 2000 ಮಂದಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗು ತ್ತಿದೆ. ಈ ಕುರಿತ ಪ್ರಕ್ರಿಯೆ ಶೀಘ್ರ ನಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ".
-ಡಾ.ಎಂ.ಸಿ.ಸುಧಾಕರ್, ರಾಜ್ಯ ಉನ್ನತ ಶಿಕ್ಷಣ ಸಚಿವ.