ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿ: ಫೈನಲ್ ಗೇರಿದ ಮಂಗಳೂರು ವಿವಿ, ಚೆನ್ನೈನ ವೆಲ್ಸ್ ವಿವಿ
ಉಡುಪಿ, ನ.26: ಪೂರ್ಣಪ್ರಜ್ಞ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್ ಶಿಪ್ ಈ ಬಾರಿ ದಕ್ಷಿಣ ವಲಯ ಮಟ್ಟದ ಸ್ಪರ್ಧೆಯ ಪುನರಾವರ್ತನೆಯಾಗಲಿದೆ. ಇದರಲ್ಲಿ ಆತಿಥೇಯ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಚೆನ್ನೈನ ವೆಲ್ಸ್ ಇನ್ ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ರಾಷ್ಟ್ರೀಯ ವಿವಿ ಕಬಡ್ಡಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.
ಅತ್ಯುತ್ತಮ ಆಟದೊಂದಿಗೆ ತನ್ನ ವಿಜಯಿ ನಾಗಾಲೋಟವನ್ನು ಮುಂದುವರಿಸಿರುವ ಮಂಗಳೂರು ವಿವಿ ಇಂದು ಬೆಳಗ್ಗೆ ನಡೆದ ಎರಡನೇ ಸೆಮಿಫೈನಲ್ ನಲ್ಲಿ ಹರ್ಯಾಣದ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿಯನ್ನು 49-35 ಅಂಕಗಳ ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿತು.
ಮಧ್ಯಂತರದ ವೇಳೆಗೆ 30-15 ಅಂಕಗಳ ಮುನ್ನಡೆಯಲ್ಲಿದ್ದ ಮಂಗಳೂರು ವಿವಿ, ನಂತರವೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಆಕ್ರಮಣ ಹಾಗೂ ರಕ್ಷಣೆ ಎರಡರಲ್ಲೂ ತನ್ನ ಹರ್ಯಾಣ ಎದುರಾಳಿ ವಿರುದ್ಧ ಸ್ಪಷ್ಟ ಮೇಲುಗೈ ಪಡೆದಿದ್ದ ಮಂಗಳೂರು ವಿವಿ, ಭಾರೀ ಸಂಖ್ಯೆಯ ಪ್ರೇಕ್ಷರ ಸಂಪೂರ್ಣ ಬೆಂಬಲದೊಂದಿಗೆ ಸುಲಭವಾಗಿ ವಿಜಯಲಕ್ಷ್ಮೀಯನ್ನು ಒಲಿಸಿಕೊಂಡಿತು.
ದಿನದ ಮೊದಲ ಸೆಮಿಫೈನಲ್ ನಲ್ಲಿ ಅಚ್ಚರಿಯ ಫಲಿತಾಂಶ ಬಂದಿದ್ದು, ಹಾಲಿ ಚಾಂಪಿಯನ್ ಆಗಿರುವ ಹರ್ಯಾಣ ರೋಹ್ಟಕ್ ನ ಸ್ವಾಮಿ ದಯಾನಂದ ವಿವಿ ಸೋಲಿನ ಕಹಿ ಅನುಭವಿಸಿತು. ದಕ್ಷಿಣ ವಲಯ ಚಾಂಪಿಯನ್ ಆಗಿರುವ ಚೆನ್ನೈನ ವೆಲ್ಸ್ ಇನ್ ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ತಂಡ, ಎಂ.ಡಿ. ವಿವಿಯನ್ನು 49-42 ಅಂಕಗಳ ಅಂತರದಿಂದ ಪರಾಭವಗೊಳಿಸಿತು.
ನಿನ್ನೆ ಕ್ವಾರ್ಟರ್ ಫೈನಲ್ ನಲ್ಲಿ ತನ್ನ ಎದುರಾಳಿಯನ್ನು ಹೆಚ್ಚುವರಿ ಅವಧಿಯ ರೈಡ್ ನಲ್ಲಿ ರೋಚಕವಾಗಿ ಹಿಮ್ಮೆಟ್ಟಿಸಿದ್ದ ಚೆನ್ನೈನ ವೆಲ್ಸ್ ಇನ್ ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ತಂಡವನ್ನು ಇಂದು ಹಾಲಿ ಚಾಂಪಿಯನ್ ವಿರುದ್ಧ ಮದ್ಯಂತರದ ಅವಧಿಗೆ 21-23 ಅಂಕಗಳ ಹಿನ್ನಡೆಯಲ್ಲಿತ್ತು. ವಿರಾಮ ಬಳಿಕ ಒಮ್ಮಿಂದೊಮ್ಮೆಗೆ ತನ್ನ ಆಟವನ್ನು ಮೇಲ್ಮಟ್ಟಕೇರಿಸಿಕೊಂಡ ವೆಲ್ಸ್ ತಂಡ ಮುನ್ನಡೆಯನ್ನು 47-37ಕ್ಕೇರಿಸಿ ಅಂತಿಮವಾಗಿ 49-42ರ ಅಂತರದ ಜಯ ದಾಖಲಿಸಿತು. ಫೈನಲ್ ಪಂದ್ಯ ಇಂದು ಅಪರಾಹ್ನ 12 ಗಂಟೆಗೆ ನಡೆಯಲಿದೆ.
ದಕ್ಷಿಣ ವಲಯ ಫೈನಲ್ ನ ಪುನರಾವರ್ತನೆಯಾಗಿರುವ ಈ ಪಂದ್ಯದಲ್ಲಿ ಮಂಗಳೂರು ವಿವಿ, ಚೆನ್ನೈ ತಂಡವನ್ನು ಮಣಿಸಿ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವುದೇ ಕಾದು ನೋಡಬೇಕಿದೆ.