ಮನೆಮನೆಯಲ್ಲೂ ಅಂಬೇಡ್ಕರ್ ಭಾವಚಿತ್ರ ಇಡಬೇಕು: ಶರತ್ ಕುಮಾರ್
► 77ನೇ ಸಂವಿಧಾನ ಅಂಗೀಕಾರ ದಿನಾಚರಣೆ ► ತಲ್ಲೂರಿನಿಂದ ಕಾವ್ರಾಡಿವರೆಗೆ ಅಹಿಂದ ಜಾಗೃತಿ ರಥಯಾತ್ರೆ
ಕುಂದಾಪುರ, ನ.26: ಪ್ರಜ್ಞೆ, ಪರಿವರ್ತನೆ, ಸಮಾನತೆ ಹಾಗೂ ಸ್ವತಂತ್ರ ರಾಜ್ಯಾಧಿಕಾರದ ಆಶಯದೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ, ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ನೇತೃತ್ವದಲ್ಲಿ ನ.26ರಂದು 77ನೇ ಸಂವಿಧಾನ ಅಂಗೀಕಾರ ದಿನಾಚರಣೆಯ ಸವಿನೆನಪಿಗಾಗಿ ತಲ್ಲೂರಿನಿಂದ ಕಾವ್ರಾಡಿವರೆಗೆ ’ಅಹಿಂದ ಜಾಗೃತಿ ರಥಯಾತ್ರೆ’ ಹಾಗೂ ಕಾವ್ರಾಡಿಯಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು.
ಸಂವಿಧಾನದ ಮಹತ್ವ, ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಮೀಸಲಾತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಜಾಗೃತಿ ರಥಯಾತ್ರೆಗೆ ಗ್ರಾಮ ಗ್ರಾಮಗಳಲ್ಲಿಯೂ ಅಭೂತಪೂರ್ವ ಸ್ವಾಗತ ದೊರೆಯಿತು.
ತಲ್ಲೂರು ಜಂಕ್ಷನ್ನಲ್ಲಿ ಆಯೋಜಿಸಿದ್ದ ರಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕೆಡಿಪಿ ಸದಸ್ಯ ಹಾಗೂ ಪಂಚಗಂಗಾ ಸಹಕಾರ ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರ ಪ್ರತಿಯೊಂದು ಮನೆಯಲ್ಲಿಯೂ ಇರಬೇಕು. ಸಂವಿಧಾನ ಅಂಗೀಕಾರ ದಿನವನ್ನು ಪ್ರತಿಯೊಬ್ಬ ಭಾರತೀಯನೂ ಹಬ್ಬದಂತೆ ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ವ್ಯವಸ್ಥಾಪಕ ಗುರುಮೂರ್ತಿ, ತಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್, ಸಂಜೀವಿನಿ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ ಹಾಗೂ ತಂಡದ ಸದಸ್ಯರು, ಅಂಗನವಾಡಿ ಶಿಕ್ಷಕಿಯರಾದ ಜ್ಯೋತಿ, ಜಯಲಕ್ಷ್ಮಿ , ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸಂಜು ದೇವಾಡಿಗ, ಕೃಷ್ಣ ಪೂಜಾರಿ, ರಾಧಾಕೃಷ್ಣ ಶೇರುಗಾರ್ ಉಪಸ್ಥಿತರಿದ್ದರು. ದೀಪಾ ಶೆಟ್ಟಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ್ ಕುಮಾರ ತಲ್ಲೂರು ಮಾತನಾಡಿ, ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ನಡೆಸಿದ ಹೋರಾಟ, ಸಾಮಾಜಿಕ ನ್ಯಾಯ, ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಹಾಗೂ ಮೀಸಲಾತಿಯ ಮಹತ್ವವನ್ನು ಎಳೆಎಳೆಯಾಗಿ ವಿವರಿಸಿದರು.
ತಲ್ಲೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ದೀಪ್ತಿ ಸತೀಶ್ ಅವರು ನೀಲಿ ಧ್ವಜವನ್ನು ಬೀಸುವ ಮೂಲಕ ಅಹಿಂದ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿದರು.