ತೆಕ್ಕಟ್ಟೆ ಗ್ರಾಮಸಭೆಯಲ್ಲಿ ರಾರಾಜಿಸಿದ ರಾ. ಹೆದ್ದಾರಿ ಸಮಸ್ಯೆ, ಸಂಕಟ
ಉಡುಪಿ, ನ.26: ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಸ್ಥಳೀಯರು, ವಾಹನ ಸವಾರರು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದರೂ ಕೂಡ ಸಂಬಂದಪಟ್ಟ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಕಂಪೆನಿ ಸ್ಪಂದನೆ ನೀಡುತ್ತಿಲ್ಲ. ಸಣ್ಣಪ್ರಮಾಣದ ಮಳೆಗೆ ರಸ್ತೆಯ ಇಕ್ಕೆಲಗಳು ಹೊಳೆಯಂತಾಗುತ್ತಿದ್ದು ಮನೆಗಳಿಗೆ ನೀರು ನುಗ್ಗುತ್ತಿದೆ. ಚರಂಡಿ ಸಮಸ್ಯೆ ಶೀಘ್ರ ಬಗೆಹರಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣಮಂಟಪದಲ್ಲಿ ಗುರುವಾರ ನಡೆದ ಮಹಾತ್ಮಗಾಂಧಿ ತೆಕ್ಕಟ್ಟೆ ಗ್ರಾಮ ಪಂಚಾಯತಿ 2026-27ನೇ ಸಾಲಿನ ಗ್ರಾಮಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ಜನರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೊದಲಿಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗಣಪತಿ ಟಿ. ಶ್ರೀಯಾನ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ 4ನೇ ವಾರ್ಡ್‌ನ ಸಮಸ್ಯೆ ಬಗ್ಗೆ ಗ್ರಾಮಸ್ಥರು ಚರ್ಚಿಸಬೇಕಿದೆ. ತೆಕ್ಕಟ್ಟೆಯಲ್ಲಿ ಹೆದ್ದಾರಿ ಸಮಸ್ಯೆಯಿಂದ ಪ.ಪಂಗಡದ ಮನೆಗೆ ನೀರು ನುಗ್ಗುವ ಭೀತಿಯಿದೆ. ಮೂಲ ತೋಡುಗಳಲ್ಲಿ ನೀರು ಹರಿದು ಹೋಗಬೇಕು. ಆದರೆ ಅದನ್ನು ಅವೈಜ್ಞಾನಿಕ ವಾಗಿ ಬೇರೆಡೆಗೆ ತಿರುವು ನೀಡಿದ ಕಾರಣ ಈ ಸಮಸ್ಯೆಯಾಗುತ್ತಿದೆ. ಕಾಮಗಾರಿ ಸಲುವಾಗಿ 30 ಮೀ. ಜಾಗ ಸ್ವಾಧೀನವಾಗಿದ್ದರೂ ಕೆಲಸ ವಿಳಂಬ ಏಕೆ ಎಂದು ಪ್ರಶ್ನಿಸಿದ ಅವರು ಕಾಮಗಾರಿಗೆ ತಡೆಯೊಡ್ಡುವುದು, ರಾಜಕೀಯ ಶಿಪಾರಸ್ಸು ಮಾಡುವುದು ಏಕೆ?. ಹಲವರು ಮೃತಪಟ್ಟಿದ್ದಾರೆ, ಸಾವು-ನೋವುಗಳಾಗಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಆಡಳಿತ ವ್ಯವಸ್ಥೆ ಸಾಮಾಜಿಕ ನ್ಯಾಯ ಕೊಡಬೇಕು. 30 ಮಿ. ಭೂಸ್ವಾಧೀನದ ಬಗ್ಗೆ ವಿವರಣೆ ನೀಡಿ ಎಂದರು.
ತೆಕ್ಕಟ್ಟೆಯಲ್ಲಿರುವ ಅಷ್ಟು ಚರಂಡಿ ನೀರನ್ನು ನಮ್ಮ ಮನೆ ಬಳಿ ಬಿಟ್ಟಿದ್ದಾರೆ. ಮನೆ ಬಿದ್ದು ಹೋಗುತ್ತದೆ ಎಂಬ ಚಿಂತೆಯಾಗುತ್ತಿದೆ. ಕನ್ನಡದಲ್ಲಿ ಹೇಳಿಯಾಗಿದೆ..ಬೇಕಾದರೆ ಹಿಂದಿ, ಇಂಗ್ಲೀಷ್‌ನಲ್ಲೂ ಹೇಳುತ್ತೇನೆ ಎಂದು ಗ್ರಾಮಸ್ಥ ಸುದರ್ಶನ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ಪ್ಲ್ಯಾನ್ ಮಾಡುವಾಗ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಮಾಡಿ. ಒಂದೊಂದು ಭಾಗವನ್ನು ಪೂರ್ಣಗೊಳಿಸಿದ ಮೇಲೆ ಮತ್ತೊಂದು ಭಾಗ ಆರಂಭಿಸಿ. ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಿ. ತೆಕ್ಕಟ್ಟೆಯಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ನ್ಯಾಯಮಾಡಬೇಡಿ. ನಾವಿಲ್ಲಿ ನಿತ್ಯ ಸತ್ತು ಬದುಕುವಂತಾಗಿದೆ ಎಂದು ಗ್ರಾಮಸ್ಥರಾದ ಗಣಪತಿ ಟಿ. ಶ್ರೀಯಾನ್, ಶ್ರೀನಾಥ್ ಮೇಲ್ತಾರುಮನೆ, ವಿನೋದ್ ದೇವಾಡಿಗ, ಕಿರಣ್ ಪೂಜಾರಿ ಮೊದಲಾದವರು ಆಗ್ರಹಿಸಿದರು. ಹಾರಿಕೆಯ ಉತ್ತರ ನೀಡಲು ಮುಂದಾದ ಎನ್‌ಎಚ್‌ಎಐ ಅಧಿಕಾರಿ ಅಕುಲ್ ಅವರಿಗೆ ನಾಗರಿಕರು ಪ್ರಶ್ನೆಗಳ ಸುರಿಮಳೆಗೆರೆದರು.
ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಗುತ್ತಿಗೆದಾರರು ಕೆಲಸ ಮಾಡಿ ಹೋಗುತ್ತಾರೆ. ಅನುಭವಿಸುವುದು ಇಲ್ಲಿನ ಜನರು. ಚರಂಡಿ (ತೋಡು) ಬಿಡಿಸಿಕೊಟ್ಟು ನೀರು ಹರಿಯುವಿಕೆಗೆ ಸೂಕ್ತ ಅವಕಾಶ ಕಲ್ಪಿಸಿ ಕಾಮಗಾರಿ ಮಾಡಿ. ಇಲ್ಲವಾದರೆ ಮುಂದಿನ ದಿನದಲ್ಲಿ ಕಾಮಗಾರಿ ಮಾಡಲು ಬಿಡಲ್ಲ. ಸಮರ್ಪಕ ಉತ್ತರ ನೀಡಿ, ಜನರಲ್ಲಿ ಗೊಂದಲ ಸೃಷ್ಟಿಸಬೇಡಿ. ಜನರಿಗೆ ಮನದಟ್ಟುಮಾಡಿ, ವಿಶ್ವಾಸಕ್ಕೆ ಪಡೆದು ತೊಂದರೆಯಾಗದಂತೆ ಕಾಮಗಾರಿ ಮಾಡಿ ಎಂದು ಹೇಳಿದರು.
ನೈಸರ್ಗಿಕ ತೋಡುಗಳಲ್ಲಿ ಮಳೆ ನೀರು ಸರಾಗವಾಗಿ ಹೋಗುತ್ತಿತ್ತು. ಆದರೆ ಈಗ ಹೋಗುತ್ತಿಲ್ಲ. 20 ವರ್ಷದ ಹಿಂದಿನ ವ್ಯವಸ್ಥೆ ಈಗಿಲ್ಲ. ಬಹಳಷ್ಟು ಬದಲಾವಣೆ ಆಗಿದೆ. ಅದಕ್ಕೆ ತಕ್ಕಂತೆ ಕಾಮಗಾರಿಯನ್ನು ಜನಪರವಾಗಿ ಮಾಡಬೇಕು. ಮೂಲ ತೋಡಿಗೆ ನೀರು ಹರಿಯಲು ಅವಕಾಶ ಕಲ್ಪಿಸಬೇಕು ಎಂದು ಗಣಪತಿ ಶ್ರೀಯಾನ್, ವಿನೋದ್ ಹೇಳಿದರು.
ವಕೀಲ ಅವಿನಾಶ್ ಶೆಟ್ಟಿ ಮಾತನಾಡಿ, ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ, ಚರಂಡಿ, ರಸ್ತೆ ಅಪಘಾತಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಿಂದ ಲಿಖಿತ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮವಹಿಸಿಲ್ಲ. ಲೀಗಲ್ ನೋಟಿಸ್ ನೀಡಿದ ಮೇಲೆ ಕೆಲವೆಡೆ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಗ್ರಾಪಂ ಆಡಳಿತಾಧಿಕಾರಿ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿ ಆಶಾ, ಪಿಡಿಒ ಸಂತೋಷ್ ಇದ್ದರು. ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ವರದಿ ವಾಚಿಸಿದರು.