×
Ad

ಬಡ ಕಕ್ಷಿದಾರನಿಗೆ ಬೇಗನೆ ನ್ಯಾಯ ಸಿಗಲು ಸಿಪಿಸಿಗೆ ತಿದ್ದುಪಡಿ; ಶೀಘ್ರ ಜಾರಿ: ಬ್ರಹ್ಮಾವರದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್

Update: 2023-08-05 20:06 IST

ಬ್ರಹ್ಮಾವರ, ಆ.5: ರಾಜ್ಯದ ಬಡ ಕಕ್ಷಿದಾರರಿಗೆ ಶೀಘ್ರದಲ್ಲೇ ನ್ಯಾಯದಾನ ಸಿಗುವಂತಾಗಲು ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ (ಸಿಪಿಸಿ)ಗೆ ತಿದ್ದುಪಡಿ ಮಾಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆದಿದ್ದು, ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಇದನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಮತ್ತು ವಕೀಲರ ಸಂಘ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡುತಿದ್ದರು.

ಬಡವರಿಗೆ ನ್ಯಾಯ ಸರಿಯಾದ ಸಮಯಕ್ಕೆ ಸಿಗಬೇಕಾಗಿದೆ. ವಿಳಂಬ ನ್ಯಾಯದಾನ ಎಂಬುದು ನ್ಯಾಯವನ್ನು ನಿರಾಕರಿಸಿ ದಂತೆ ಎಂಬ ಮಾತು ನಮ್ಮಲ್ಲಿದೆ. ಇಂಥ ಬಡ ಕಕ್ಷಿದಾರರಿಗೆ ಬೇಗ ನ್ಯಾಯ ಸಿಗುವ ಉದ್ದೇಶ ದಿಂದಲೇ ನಮ್ಮ ಸರಕಾರ ಸಿವಿಲ್ ಪ್ರೊಸೀಜರ್ ಕೋಡ್‌ಗೆ ತಿದ್ದುಪಡಿ ಮಾಡಿ ಉಭಯ ಸದನಗಳಲ್ಲಿ ಅದಕ್ಕೆ ಅನುಮೋದನೆ ಪಡೆದುಕೊಂಡಿದೆ. ಇದರಲ್ಲಿ 6 ತಿಂಗಳ ಒಳಗೆ ವ್ಯಾಜ್ಯಗಳನ್ನ ವಿಲೇವಾರಿ ಮಾಡುವ ಹಾಗೂ ಪ್ರಕರಣ ಗಳನ್ನು 3ಕ್ಕಿಂತ ಹೆಚ್ಚು ಬಾರಿ ಮುಂದೂಡದಂತೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಶೀಘ್ರದಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆಯಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮ ನ್ಯಾಯಾಲಯ: ಪ್ರಸ್ತುತ ಸರಕಾರದ ಅನೇಕ ಸೇವೆ, ಯೋಜನೆ ಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿ ಸಲಾಗುತ್ತಿದೆ. ಅದೇ ರೀತಿ ನ್ಯಾಯದಾನ ವ್ಯವಸ್ಥೆಯನ್ನೂ ಸಹ ಸಾರ್ವಜನಿಕರ ಮನೆ ಬಾಗಲಿಗೆ ತಲುಪಿಸಿ, ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವ ಉದ್ದೇಶದಿಂದ ಇದೇ ವರ್ಷ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿ ಸಲಾಗುತ್ತಿದ್ದು, 2ರಿಂದ 3ಪಂಚಾಯತ್‌ಗಳಿಗೆ ಒಂದರಂತೆ ಸುಮಾರು 2000 ಗ್ರಾಮ ನ್ಯಾಯಾಲಯಗಳನ್ನು ರಾಜ್ಯಾದ್ಯಂತ ಹಂತಹಂತವಾಗಿ ಆರಂಭಿಸಲಾಗುವುದು ಎಂದರು.

2006-08ರಲ್ಲಿ ದೇಶದಲ್ಲಿ ಗ್ರಾಮ ನ್ಯಾಯಾಲಯ ಕಲ್ಪನೆಯನ್ನು ಪ್ರಾರಂಭಿಸಲಾಗಿತ್ತು. ಹಿಮಾಚಲ ಪ್ರದೇಶದಲ್ಲಿ ಇಂದು ಯಶಸ್ವಿಯಾಗಿ ನಡೆಯುತ್ತಿದೆ. ಕರ್ನಾಟಕದಲ್ಲೂ 2006ರಲ್ಲಿ ಎರಡು ಪ್ರಾಯೋಗಿಕ ಗ್ರಾಮ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಮುಂದಿನ ಸರಕಾರ ಅದನ್ನು ಮುಂದುವರಿಸಲಿಲ್ಲ. ಇದೀಗ ಕಾಂಗ್ರೆಸ್ ಸರಕಾರ ಮತ್ತೆ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ವಿಶೇಷ ಒತ್ತು ನೀಡುತಿದ್ದು ಹಂತಹಂತವಾಗಿ 2000 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ನೀತಿಯನ್ನು ತಕ್ಷಣದಿಂದ ಜಾರಿಗೊಳಿಸಲಿದೆ ಎಂದು ಕಾನೂನು ಸಚಿವರು ನುಡಿದರು.

ವ್ಯಾಜ್ಯಮುಕ್ತ ಗ್ರಾಮ: ರಾಜ್ಯದಲ್ಲಿ ವ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಕಲ್ಪನೆ ಇದ್ದು, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಈ ಬಗ್ಗೆ ಕೆಲಸ ನಡೆಯುತ್ತಿದೆ. ಪ್ರತೀ ಗ್ರಾಮದಲ್ಲಿ ಕನಿಷ್ಠ ಇಬ್ಬರು ಉತ್ತಮ ಕೌನ್ಸಿಲಿಂಗ್ ಮಾಡುವ ವ್ಯಕ್ತಿಗಳಿದ್ದಲ್ಲಿ ಇದು ಸಾಧ್ಯವಾಗಲಿದೆ. ಗ್ರಾಮಸ್ಥರು ಇದನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಎಚ್.ಕೆ. ಪಾಟೀಲ್ ನುಡಿದರು.

ಸುಪ್ರೀಂಕೋರ್ಟ್‌ನಿಂದ ಕೆಳ ನ್ಯಾಯಾಲಯಗಳವರೆಗೆ ಅನೇಕ ಪ್ರಕರಣಗಳು ಅವಧಿ ಮೀರಿದ್ದರೂ ಇತ್ಯರ್ಥಗೊಂಡಿಲ್ಲ. ವಕೀಲರು ಆದಷ್ಟು ಶೀಘ್ರದಲ್ಲಿ ಕಕ್ಷಿದಾರರಿಗೆ ನ್ಯಾಯ ದೊರಕಿಸಬೇಕು. ವ್ಯಾಜ್ಯಗಳು ಬೇಗ ಇತ್ಯರ್ಥಗೊಂಡಲ್ಲಿ ಸಮಾಜ ದಲ್ಲಿ ಸಂತೋಷ ಸಮಾಧಾನ ನೆಲೆಗೊಳ್ಳಲಿದೆ ಎಂದರು.

ಬ್ರಹ್ಮಾವರದಲ್ಲಿ ಪ್ರಸ್ತುತ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಬದಲು ಖಾಯಂ ನ್ಯಾಯಾಲಯ ಆರಂಭಿಸುವ ಬಗ್ಗೆ ಮನವಿ ಬಂದಿದ್ದು, ಈ ಕುರಿತು ನ್ಯಾಯಾಂಗ ಇಲಾಖೆ ಮೂಲಕ ಅಗತ್ಯ ಕಡತ ಸಲ್ಲಿಕೆಯಾದಲ್ಲಿ 48 ಗಂಟೆಯೊಳಗೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿ ಯಲ್ಲಿ ತೊಡಗಿಕೊಳ್ಳಬೇಕು. ಮಹಿಳಾ ವಕೀಲರು ಕಾನೂನು ಮೂಲಕ ಮಾತ್ರವಲ್ಲದೇ ಹೃದಯದ ಭಾವನೆಗಳ ಮೂಲಕ ವಾದ ಮಾಡಿ ಕಕ್ಷಿದಾರರಿಗೆ ಶೀಘ್ರದಲ್ಲಿ, ನ್ಯಾಯ ಕೊಡಿಸಬಲ್ಲರು ಎಂದರು.

ವಿದ್ಯಾವಂತ ಮತ್ತು ಪ್ರಜ್ಞಾವಂತರ ಜಿಲ್ಲೆಯಾದ ಉಡುಪಿಯಲ್ಲಿ ಹೆಚ್ಚು ಮಹಿಳಾ ವಕೀಲರು ರೂಪುಗೊಳ್ಳಬೇಕು. ಬ್ರಹ್ಮಾವರ ವ್ಯಾಪ್ತಿಯಲ್ಲಿ 4000ಕ್ಕೂ ಅಧಿಕ ವ್ಯಾಜ್ಯಗಳಿದ್ದು, ಇಲ್ಲಿಗೆ ಖಾಯಂ ನ್ಯಾಯಾಲಯ ಆರಂಭಿಸುವ ಬಗ್ಗೆ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ನಮ್ಮ ದೇಶದ ಕಾನೂನು ಮತ್ತು ಸಂವಿಧಾನ ಬಗ್ಗೆ ಇಡೀ ವಿಶ್ವದಲ್ಲಿ ಮೆಚ್ಚುಗೆ ಇದೆ. ಕ್ಷಕಿದಾರರಿಗೆ ಶೀಘ್ರ ನ್ಯಾಯ ದೊರಕಿಸುವ ಮೂಲಕ ನ್ಯಾಯಾಧೀಶರು ಹಾಗೂ ವಕೀಲರು ಬಡ ಕಕ್ಷಿದಾರರ ಹಿತ ಕಾಯಬೇಕು. ಈ ಮೂಲಕ ಕಾನೂನು ಮತ್ತು ಸಂವಿಧಾನ ಉದ್ದೇಶ ಸಾಕಾರಗೊಳ್ಳಬೇಕು ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡಗಳ ಸಮಿತಿ ಅಧ್ಯಕ್ಷರಾದ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ನ್ಯಾಯಾಲಯವನ್ನು ಉದ್ಘಾಟಿಸಿದ್ದು, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಹೆಚ್ಚು ವ್ಯಾಜ್ಯಗಳಿರುವ ಅಂಕಿ ಅಂಶಗಳ ಆಧಾರದ ಮೇಲೆ ಮನೆ ಬಾಗಿಲಿಗೆ ಸೇವೆ ತಲುಪಿಸುವ ಉದ್ದೇಶದಿಂದ ಸಂಚಾರಿ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದೆ. ಬ್ರಹ್ಮಾವರದ ಸಂಚಾರಿ ನ್ಯಾಯಾಲಯವು ವಾರದಲ್ಲಿ 2 ದಿನ ಕಾರ್ಯ ನಿರ್ವಹಿಸಲಿದ್ದು, ಇಲ್ಲಿ ಖಾಯಂ ನ್ಯಾಯಾಲಯ ಆರಂಭಿಸುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಎಂ. ಐ. ಅರುಣ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯ ಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಇಲಾಖೆ ಕೇಂದ್ರ ವಲಯ, ಶಿವಮೊಗ್ಗದ ಪ್ರಭಾರ ಮುಖ್ಯ ಅಭಿಯಂತರರು (ಸಂ. ಮತ್ತು ಕ.) ಕೆ. ಜಿ. ಜಗದೀಶ್, ಬ್ರಹ್ಮಾವರ ವಕೀಲರ ಸಂಘದ ಕಾರ್ಯದರ್ಶಿ ಶ್ರೀಪಾದ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಸ್ವಾಗತಿಸಿದರು.ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಟೀವನ್ ಲೂಯಿಸ್ ಹಾಗೂ ರೊನಾಲ್ಡ್ ಪುರ್ಟಾಡೊ ಅತಿಥಿಗಳನ್ನು ಪರಿಚಯಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News