ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಮಾ.1ರಂದು ಪ್ರತಿಭಟನಾ ಮೆರವಣಿಗೆ ನಿರ್ಧಾರ: ಅಮೃತ್ ಶೆಣೈ
ಉಡುಪಿ: ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೇ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಎರಡನೇ ಹಂತದ ಹೋರಾಟದ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಸಮಾಲೋಚನೆ ಸಭೆಯನ್ನು ಶನಿವಾರ ಕುಂಜಿಬೆಟ್ಟು ಶಾರಾದಾ ಕಲ್ಯಾಣ ಮಂಟಪದ ಆವರಣದಲ್ಲಿರುವ ಜ್ಞಾನ ಮಂದಿರದಲ್ಲಿ ಕರೆಯಲಾಯಿತು.
ಸಭೆಯಲ್ಲಿ ಪರ್ಕಳ, ಸಂತೆಕಟ್ಟೆ, ಆದಿಉಡುಪಿ, ಅಂಬಲಪಾಡಿ ಭಾಗದ ಹಲವು ಮಂದಿ ಪಾಲ್ಗೊಂಡು ಚರ್ಚೆ ನಡೆಸಿದ್ದು, ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಮಾ.1ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ತಿಳಿಸಿದರು.
ಮುಂದಿನ ದಿನಗಳಲ್ಲಿ ಪರ್ಕಳ, ಸಂತೆಕಟ್ಟೆ, ಆದಿಉಡುಪಿ, ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅವ್ಯವಸ್ಥೆಯ ವಿರುದ್ದವೂ ಹೋರಾಟ ನಡೆಸಲಿರುವ ಹಿನ್ನೆಲೆಯಲ್ಲಿ ಸಮಿತಿಯ ಹೆಸರನ್ನು ಉಡುಪಿ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಎಂದು ಮರುನಾಮಕರಣ ಮಾಡಿ ನಿರ್ಣಯಿಲಾಯಿತು.
ಸಭೆಯಲ್ಲಿ ಅಂಬಲಪಾಡಿ ಹೋರಾಟ ಸಮಿತಿಯ ಭಾಸ್ಕರ್ ಶೆಟ್ಟಿ, ನಗರಸಭೆ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ, ಮುಹಮ್ಮದ್, ಯಾದವ್ ಅಮೀನ್, ಕರವೇ ಮುಖಂಡರಾದ ಅನ್ಸಾರ್ ಅಹ್ಮದ್, ಸುಜಯ್ ಪೂಜಾರಿ, ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಇದ್ರೀಸ್ ಹೂಡೆ, ಪ್ರಮುಖರಾದ ಪದ್ಮನಾಭ ಮಲ್ಪೆ, ಕೀರ್ತಿ ಶೆಟ್ಟಿ, ಪೀರು ಸಾಹೇಬ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಚಾರ್ಲ್ಸ್ ಆ್ಯಂಬ್ಲರ್, ಡಾ.ಸಂತೋಷ್ ಬೈರಂಪಳ್ಳಿ, ಕಿರಣ್ ಹೆಗ್ಡೆ, ಶಶಿರಾಜ್ ಕುಂದರ್ ಮೊದ ಲಾದವರು ಉಪಸ್ಥಿತರಿದ್ದರು.