ಉಡುಪಿ ಜಿಲ್ಲೆಯ 166 ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ - ಜಾಗೃತಿ ಕಮಿಟಿ ರಚನೆ: ಎಸ್ಪಿ
ಉಡುಪಿ, ಆ.11: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ನಶೆಯಿಂದ ಉಷೆಯೆಡೆಗೆ, ನಶೆಮುಕ್ತ ಭಾರತದತ್ತ ನಮ್ಮ ಚಿತ್ತ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ 166 ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಮತ್ತು ಜಾಗೃತಿ ಕಮಿಟಿಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಮುಖ್ಯಸ್ಥರು ಹಾಗೂ ಪೊಲೀಸ್ ಇಲಾಖೆಯು ಸಂಪರ್ಕ ದಲ್ಲಿದಾಗ ವಿದ್ಯಾರ್ಥಿಗಳು ಮಾದಕ ವಸ್ತುವಿನ ಬಲೆಗೆ ಬೀಳಲು ಹಿಂಜರಿಯ ಬಹುದೆಂಬ ಉದ್ದೇಶದಿಂದ ಜಿಲ್ಲೆಯ 120 ಪದವಿ ಪೂರ್ವ ಕಾಲೇಜು ಹಾಗೂ 46 ವೃತ್ತಿಪರ ಕಾಲೇಜುಗಳಲ್ಲಿ ಕಮಿಟಿಗಳನ್ನು ರಚಿಸಲಾಗಿದೆ. ಇವು ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದರು.
ಈ ಕಮಿಟಿಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಇಬ್ಬರು ಸ್ಟಾಫ್ ಹಾಗೂ ಪ್ರತಿ ತರಗತಿಯಿಂದ ಓರ್ವ ವಿದ್ಯಾರ್ಥಿ ಗಳಿರಬೇಕು. ಅದರಲ್ಲಿ ಕನಿಷ್ಟ ಇಬ್ಬರು ವಿದ್ಯಾರ್ಥಿನಿಯರನ್ನು ಹೊಂದಿರಬೇಕು. ಈ ಕಮಿಟಿಗೆ ಸರಹದ್ದಿನ ಠಾಣಾಧಿಕಾರಿ ನೋಡಲ್ ಅಧಿಕಾರಿಯಾಗಿರುತ್ತಾರೆ. ಪ್ರತೀ ತಿಂಗಳು ಕಮಿಟಿ ಮೀಟಿಂಗ್ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ರಕ್ತಪರೀಕ್ಷೆ: ಪ್ರತಿ ಕಾಲೇಜಿನಲ್ಲಿ ತ್ರೈಮಾಸಿಕವಾಗಿ ಶೇ.10 ವಿದ್ಯಾರ್ಥಿಗಳನ್ನು ರ್ಯಾಂಡಮ್ ಆಗಿ ರಕ್ತ ಪರೀಕ್ಷೆ ಒಳಪಡಿಸಲಾಗುತ್ತದೆ. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಬಗ್ಗೆ ಪಾಸಿಟಿವ್ ಬಂದಲ್ಲಿ ಮಾಹಿತಿ ಯನ್ನು ನೋಡಲ್ ಅಧಿಕಾರಿಯವರಿಗೆ ನೀಡಲಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಯಾವುದೇ ವಿದ್ಯಾರ್ಥಿ ಗಳಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಅಂಶ ಕಂಡುಬಂದಲ್ಲಿ ಅವರವರ ಮಾಹಿತಿಯನ್ನು ಗೌಪ್ತವಾಗಿರಿಸಿ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಮನಪರಿವರ್ತನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಮುನ್ನ ಒಪ್ಪಿಗೆ ಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವೈಧ್ಯಕೀಯ ತಪಾಸಣೆ ನಡೆಸಲು ತಮ್ಮ ನುರಿತ ಸಿಬ್ಬಂದಿ ತಂಡದೊಂದಿಗೆ ನಿಗದಿ ಪಡಿಸುವ ಸ್ಥಳಗಳಲ್ಲಿ ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳ ರಕ್ತದಲ್ಲಿ ಡಗ್ಸ್ ಸೇವನೆ ಬಗ್ಗೆ ಪಾಸಿಟಿವ್ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಕೌಸಿಲಿಂಗ್‌ಗೆ ಒಳಪಡಿಸಿ, ಡ್ರಗ್ಸ್ ನೀಡುತ್ತಿರುವ ಪೆಡ್ಲರ್ ಬಗ್ಗೆ ಮಾಹಿತಿ ಪಡೆದುಕೊಂಡು ನೋಡಲ್ ಅಧಿಕಾರಿಗೆ ನೀಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಮಟ್ಟದ ಪೊಲೀಸ್ ನೋಡಲ್ ಅಧಿಕಾರಿಯಾಗಿ ಉಡುಪಿ ಸೆನ್ ಪೊಲೀಸ್ ಠಾಣೆ (ಮೊ-8277989100)ಯ ಡಿವೈಎಸ್ಪಿ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಪ್ರಭಾರ ನೋಡಲ್ ಅಧಿಕಾರಿಯಾಗಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.