ಬಜಗೋಳಿ ಸೊಸೈಟಿಯಲ್ಲಿ ಕಳವಿಗೆ ಯತ್ನ ಪ್ರಕರಣ: ಆರೋಪಿ ಸೆರೆ
Update: 2026-01-18 22:03 IST
ಕಾರ್ಕಳ, ಜ.18: ಬಜಗೋಳಿ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ನುಗ್ಗಿ ಕಳವಿಗೆ ಯತ್ನಿಸಿದ್ದ ಆರೋಪಿ ಯನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಟ್ಟೆ ದರ್ಖಾಸು ನಿವಾಸಿ ಸುರೇಶ ಕೊರಗ ಪೂಜಾರಿ(53) ಬಂಧಿತ ಆರೋಪಿ. ಈತ ಜ.16ರಂದು ಸೊಸೈಟಿ ಬೀಗ ಮುರಿದು ಒಳಗೆ ನುಗ್ಗೆ ಕಳ್ಳತನಕ್ಕೆ ಪ್ರಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನಕ್ಕೆ ಪ್ರಯತ್ನಿಸಿದ ವ್ಯಕ್ತಿ ಗುರುತು ಪತ್ತೆಯಾಗಿತ್ತು.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜ.17ರಂದು ಆರೋಪಿಯನ್ನು ಬಂಧಿಸಿದರು. ಆರೋಪಿಗೆ ನ್ಯಾಯಾ ಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ಮೇಲೆ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಪಡುಬಿದ್ರೆ, ಬೆಳ್ತಂಗಡಿ, ಉಡುಪಿ ನಗರ, ಗೋವಾ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.