×
Ad

ರಾಜಕೀಯ ಕ್ರೂರ ಸುಳ್ಳುಗಳನ್ನು ರಂಗಭೂಮಿ ಮಣಿಸಲಿ: ಚಿಂತಕ ಫಕೀರ್ ಮುಹಮ್ಮದ್ ಕಟಪಾಡಿ

ಕರಾವಳಿಯ ನಿರ್ದಿಗಂತ ಉದ್ಘಾಟಿಸಿದ ಸಾಹಿತಿ

Update: 2026-01-18 21:48 IST

ಉಡುಪಿ, ಜ.18: ಇಂದು ರಾಜಕೀಯ ಸುಳ್ಳುಗಳು ಬಹಳಷ್ಟು ಕ್ರೂರ ರೀತಿಯಲ್ಲಿ ನಮ್ಮ ಮುಂದೆ ಇದೆ ಎಂಬುದು ನಾವು ಅರ್ಥ ಮಾಡಿ ಕೊಳ್ಳಬೇಕು. ಆ ಕ್ರೂರವಾದ ಸುಳ್ಳುಗಳನ್ನು ಎದುರಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶ ರಂಗಭೂಮಿಯ ಮೂಲಕ ಅದನ್ನು ಮಣಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಸಾಹಿತಿ ಹಾಗೂ ಚಿಂತಕ ಫಕೀರ್ ಮುಹಮ್ಮದ್ ಕಟಪಾಡಿ ಹೇಳಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ಕರಾವಳಿಯ ನಿರ್ದಿಗಂತವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಿರ್ದಿಗಂತ ಶಬ್ದ ನಮ್ಮನ್ನು ಯಾವುದೋ ಒಂದು ಪ್ರಪಂಚಕ್ಕೆ ಕರೆದು ಕೊಂಡು ಹೋಗುವ ರೀತಿಯಲ್ಲಿ ಇದೆ. ಕುವೆಂಪು ಸೃಷ್ಠಿ ಮಾಡಿದ್ದರೂ ಪ್ರಕಾಶ್ ರಾಜ್ ಅದನ್ನು ಇನ್ನಷ್ಟು ವಿಶಾಲ ಮಾಡಿಕೊಡುತ್ತಿದ್ದಾರೆ. ನಿರ್ದಿಗಂತ ತಂಡದ ಉದ್ದೇಶ ಎಲ್ಲವೂ ಕೂಡ ಯಶಸ್ವಿಯಾಗಲಿ ಹಾಗೂ ಗೆಲ್ಲಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ನಿರ್ದಿಗಂತದ ಸ್ಥಾಪಕ, ರಂಗಕರ್ಮಿ ಹಾಗೂ ಚಿತ್ರನಟ ಪ್ರಕಾಶ್ ರಾಜ್ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಪ್ರಕಾಶ್ ರಾಜ್ ಮತ್ತು ನಿರ್ದಿಗಂತ ತಂಡದಿಂದ ಸಮತೆಯ ಹಾಡು ನಡೆಯಿತು.

ಮಕ್ಕಳ ನಾಟಕಗಳ ಪ್ರದರ್ಶನ

ಬೆಳಗ್ಗೆ ಬಿಂದು ರಕ್ಷಿದಿ ಅವರ ನಿರ್ದೇಶನದ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಮೃಗ ಮತ್ತು ಸುಂದರಿ’ ಹಾಗೂ ಅಪರಾಹ್ನ ವರದರಾಜ್ ಬಿರ್ತಿ ರಚಿಸಿ, ರೋಹಿತ್ ಎಸ್.ಬೈಕಾಡಿ ನಿರ್ದೇಶಿಸಿದ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಕ್ಕಳಿಂದ ವಿಜ್ಞಾನ ನಾಟಕ ‘ಕ್ಯೂರಿಯಸ್’ ಪ್ರದರ್ಶನಗೊಂಡಿತು.

ಸಂಜೆ ಉದ್ಘಾಟನಾ ಸಮಾರಂಭದ ಬಳಿಕ ರೋಹಿತ್ ಎಸ್.ಬೈಕಾಡಿ ನಿರ್ದೇಶನದಲ್ಲಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಮಕ್ಕಳ ನಾಟಕ ‘ಕುಣಿ ಕುಣಿ ನವಿಲೇ’ ಪ್ರದರ್ಶನಗೊಂಡಿತು.

‘ನಿರ್ದಿಗಂತ ರಂಗ ತರಬೇತಿ ನೀಡುವ ಸಂಸ್ಥೆಯಲ್ಲ. ನಿರ್ದಿಗಂತ ಜೀವ ಸೆಲೆಯಾಗಬೇಕು ಎಂಬುದು ನಮ್ಮ ಆಶಯ. ಹೊಸ ನೆಲೆ, ನಾಟಕಗಳು ಹೊಸ ಪ್ರಯೋಗಗಳು ಆಗಬೇಕು. ಈ ಪ್ರಕ್ರಿಯೆಯಲ್ಲಿ ರಂಗಭೂಮಿ ಹೊಸ ನಾಟಕ, ಪ್ರೇಕ್ಷಕರಿಗೆ ಹೊಸ ಅನುಭವ ಕೊಡುತ್ತ ನಟ, ನಿರ್ದೇಶಕರ ಬೆಳವಣಿಗೆ ಆಗಬೇಕು’

-ಪ್ರಕಾಶ್‌ರಾಜ್, ನಟ



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News