ಕಾನೂನು ಬಾಧ್ಯತೆ, ಹಕ್ಕುಗಳ ಅರಿವು ಅಗತ್ಯ: ನ್ಯಾ.ಎಂ.ಐ.ಅರುಣ್
ಬೈಂದೂರು ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ
ಬೈಂದೂರು, ಜು.18: ಸಮಾಜದ ದುರ್ಬಲ ವರ್ಗದವರಿಗೂ ಕೂಡ ಕಾನೂನು ಸೇವೆ ದೊರೆಯಬೇಕು. ಕಾನೂನಿನ ಅರಿವು ಪ್ರತಿ ನಾಗರಿಕನಿಗೂ ಅವಶ್ಯ. ಸಹಬಾಳ್ವೆಗೆ ಬೇಕಾದ ಅಂಶ ಕಾನೂನಿನಲ್ಲಿ ಅಡಕವಾಗಿದೆ. ಹೀಗಾಗಿ ಕಾನೂ ನಿನ ಬಾದ್ಯತೆ ಮತ್ತು ಹಕ್ಕುಗಳ ಅರಿವು ಮುಖ್ಯ. ಕಾನೂನು ರಕ್ಷಣೆ ಮತ್ತು ಸಮರ್ಪಕ ಉಪಯೋಗ ನಮ್ಮೆಲ್ಲರ ಜವಾಬ್ದಾರಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಉಡುಪಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯ ಮೂರ್ತಿಗಳಾದ ಎಂ.ಐ.ಅರುಣ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ನ್ಯಾಯಾಂಗ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ವಕೀಲರ ಸಂಘ ಬೈಂದೂರು ಇದರ ವತಿಯಿಂದ ಶನಿವಾರ ಯಡ್ತರೆ ಜೆ.ಎನ್.ಆರ್. ಕಲಾ ಮಂದಿರದಲ್ಲಿ ನಡೆದ ಬೈಂದೂರು ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಕುಂದಾಪುರ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬೈಂದೂರು ತಹಶೀಲ್ದಾರ್ ರವಿರಾಜ್ ದೀಕ್ಷಿತ್, ಸಿವಿಲ್ ನ್ಯಾಯಾದೀಶ ಅಬುತಾ ಯರ್ ಎ, ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಂ. ಐ. ಅರುಣ್‌ರನ್ನು ಬೈಂದೂರು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿತಿನ್ ವೈ. ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಸಹಾಯಕ ಸರ್ಕಾರಿ ಅಭಿಯೋಜಕ ರಾಜಶೇಖರ್ ಪಿ.ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.ವಕೀಲರ ಸಂಘದ ಉಪಾಧ್ಯಕ್ಷ ಚಿಕ್ಕಯ್ಯ ಶೆಟ್ಟಿ ಸ್ವಾಗತಿಸಿ, ನಿಕಟ ಪೂರ್ವಾಧ್ಯಕ್ಷ ಮೋಬಿ ಪಿ.ಸಿ ಸಮ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಮೇಸ್ತ ಶಿರೂರು ವಂದಿಸಿದರು.