ವಕೀಲಿ ವೃತ್ತಿ ಸವಾಲುಗಳಿಗೆ ಎಐ ತಂತ್ರಜ್ಞಾನ ಬಳಸಿಕೊಳ್ಳಿ: ನ್ಯಾ.ಎಂ.ಐ. ಅರುಣ್ ಸಲಹೆ

Update: 2026-07-18 21:35 IST

ಕುಂದಾಪುರ, ಜು.18: ನ್ಯಾಯದಾನ ಕೊಡುವಲ್ಲಿ ವಕೀಲಿ ವೃತ್ತಿ ಮಹತ್ತರ ವಾಗಿದ್ದು, ಈ ವೃತ್ತಿಯಲ್ಲಿ ಬಹುಮುಖ್ಯ ವಾಗಿ ಧೈರ್ಯ ಬೇಕು. ಈ ವೃತ್ತಿಯಲ್ಲಿ ಸ್ವಾತಂತ್ರ್ಯದೊಂದಿಗೆ ಸವಾಲುಗಳು ಕೂಡ ಇವೆ. ಪ್ರಸ್ತುತ ಎಐ ತಂತ್ರಜ್ಞಾನ ಬಳಸಿಕೊಂಡು, ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಂ.ಐ. ಅರುಣ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಕೋರ್ಟ್ ಸಭಾಂಗಣದಲ್ಲಿ ರಾಜ್ಯ ವಕೀಲರ ಸಂಘದ ಸದಸ್ಯೆಯಾಗಿ ಆಯ್ಕೆಯಾದ ಕುಂದಾಪುರದ ಶ್ಯಾಮಲಾ ಭಂಡಾರಿ ಅವರಿಗೆ ಕುಂದಾಪುರದ ವಕೀಲರ ಸಂಘದ ವತಿಯಿಂದ ನಡೆದ ಅಭಿನಂದನೆ ನೆರವೇರಿಸಿ ಮಾತನಾಡಿದರು.

ವಕೀಲರ ಸಂಘದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಬಗ್ಗೆ ಚಿಂತನೆ ನಡೆಯಬೇಕಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕಾನೂನು ವಿದ್ಯಾರ್ಥಿಗಳು ವಕೀಲ ವೃತ್ತಿ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ತಾಲೂಕು ಕಚೇರಿ, ಪೊಲೀಸ್ ಠಾಣೆ ವಿಚಾರ ಹೇಗೆ ನಿರ್ವಹಣೆ, ಮಧ್ಯಸ್ಥಿಕೆ ವಹಿಸುವುದನ್ನು ಕೂಡ ಯುವ ವಕೀಲರು ಕಲಿಯಬೇಕು. ಎಲ್ಲ ಕಡೆ ನಿರಂತರ ಕಾನೂನು ಮಾಹಿತಿ ಕಾರ್ಯಗಾರ ನಡೆಸಿ ಎಂದರು.

ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇತ್ತೀಚೆಗೆ ಲೋಕಾಯುಕ್ತ ದಾಳಿ ಮಾತ್ರ ಆಗುತ್ತಿದ್ದು, ಶಿಕ್ಷೆ ಕಮ್ಮಿಯಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿಚಾರದಲ್ಲಿ ಎಲ್ಲರೂ ಹೆಚ್ಚು ಕಾಳಜಿ ವಹಿಸ ಬೇಕಾಗಿದೆ. ಸರಕಾರಿ ಕಚೇರಿಯಲ್ಲಿ ಭಯ ಮೂಡಬೇಕಾಗಿದೆ. ಜನಸಾಮಾನ್ಯರ ಸಮಸ್ಯೆ ಪರಿಹಾರ ಆಗಬೇಕಾದರೆ ತ್ವರಿತ ಗತಿಯ ನ್ಯಾಯದಾನ ಆಗಬೇಕಾಗಿದೆ. ಮಹಿಳಾ ಮೀಸಲಾತಿ ವಕೀಲರ ಸಂಘಕ್ಕೂ ಬಂದಿದ್ದು, ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡುವ ಬಗ್ಗೆ ಮಹಿಳೆಯರಿಂದಲೇ ಚರ್ಚೆ ಆಗಬೇಕಾಗಿದೆ. ನೀವು ಯಾವ ಸ್ಥಾನಕ್ಕೆ ಹೋದರೂ, ಅದಕ್ಕೆ ಗೌರವ ಕೊಟ್ಟು, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಶುಭ ಹಾರೈಸಿದರು.

ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ, ಶ್ಯಾಮಲಾ ಭಂಡಾರಿ ಅವರ ಈವರೆಗಿನ ಸಾಧನೆ ಹಿಂದೆ ಸುದೀರ್ಘ ಹೋರಾಟವಿದೆ. ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡಿದ್ದಾರೆ. ವೃತ್ತಿ, ಉದ್ಯಮದಲ್ಲಿ ಪೈಪೋಟಿ ಯುಗವಿದು. ಆದರೆ ಅದು ಆರೋಗ್ಯಕರ ಆಗಿರಬೇಕು. ಚುನಾವಣೆಯಲ್ಲೂ ನೈತಿಕತೆಯಿಂದ ಗೆದ್ದಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯ ಸಮಿತಿ ಸದಸ್ಯೆ ಶ್ಯಾಮಲಾ ಭಂಡಾರಿ ಅಭಿನಂದನೆ ಸ್ವೀಕರಿಸಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ಜೆ. ರಾವ್ ಸ್ವಾಗತಿಸಿ, ವಕೀಲರಾದ ಟಿ.ಬಿ. ಶೆಟ್ಟಿ ಪ್ರಸ್ತಾವಿಕ ಮಾತನಾಡಿ ದರು. ಸಂತೋಷ್ ಶೆಟ್ಟಿ, ಮಲ್ಯಾಡಿ ಜಯರಾಮ ಶೆಟ್ಟಿ, ವಿಕಾಸ ಹೆಗ್ಡೆ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪರಿಚಯಿಸಿ ದರು. ವಕೀಲ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಜಯಚಂದ್ರ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News