ಎಸ್‌ಐಆರ್| ಜಿಲ್ಲೆಯಲ್ಲಿ ಶೇ.60ರಷ್ಟು ಡಿಜಿಟಲೀಕರಣ ಪೂರ್ಣ: ಉಡುಪಿ ಡಿಸಿ ಸ್ವರೂಪ ಟಿ.ಕೆ.
ಉಡುಪಿ, ಜು.18: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಮತದಾರರು ಭರ್ತಿ ಮಾಡಿ ಹಿಂದಿರು ಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ನಡೆದಿದ್ದು, ಜು.18ರ ಸಂಜೆಯವರೆಗೆ ಒಟ್ಟು ಶೇ.60.70ರ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯ ಬಿಎಲ್‌ಒಗಳು ಕಳೆದ ಬುಧವಾರವೇ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಒಟ್ಟು 10,63,876 ಮತದಾರರಿಗೆ ವಿತರಿಸುವ ಕಾರ್ಯವನ್ನು ಪೂರ್ಣಗೊಳಿಸಿದ್ದು, ಜಿಲ್ಲೆಯ ಶೇ.100ರಷ್ಟು ಮಂದಿಗೂ ನಮೂನೆಯನ್ನು ತಲುಪಿಸಿದ್ದರು. ಅವುಗಳಲ್ಲಿ ಇಂದು ಸಂಜೆಯವರೆಗೆ 6,45,877 ಮಂದಿಯ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಜಿಲ್ಲೆಯಲ್ಲಿ ಈವರೆಗೆ 4047 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಬೈಂದೂರಿನಲ್ಲಿ 1441, ಕುಂದಾಪುರ ದಲ್ಲಿ 771, ಉಡುಪಿಯಲ್ಲಿ 495, ಕಾಪುವಲ್ಲಿ 744 ಹಾಗೂ ಕಾರ್ಕಳದಲ್ಲಿ 596 ಮಂದಿ ಮತದಾರರು ಮೃತರಾಗಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 2585 ಮಂದಿ ಮತದಾರರು (ಬೈಂದೂರು 975, ಉಡುಪಿ 325, ಕುಂದಾಪುರ 787, ಕಾಪು 285, ಕಾರ್ಕಳ 213) ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 966 ಮಂದಿ ಮತದಾರರು ಆನ್‌ಲೈನ್ ಮೂಲಕ ಸ್ವದಾಖಲಾತಿಯನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.