ಬೈಲೂರು: ಪರಶುರಾಮನ ಕಂಚಿನ ಪ್ರತಿಮೆ ಬದಲು ಫೈಬರ್ ಪ್ರತಿಮೆ
ಬೈಲೂರು (ಕಾರ್ಕಳ), ಅ.16: ಹಿಂದಿನ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರತಿನಿಧಿ ಗಳು ಸೇರಿದಂತೆ ಪಕ್ಷೀಯರು ನಡೆಸಿದ ಕೋಟ್ಯಾಂತರ ರೂ.ಗಳ ಕರ್ಮಕಾಂಡಗಳನ್ನು ಬಹಿರಂಗ ಪಡಿಸುವ ಹಾಗೂ ಈ ವಿಷಯಗಳ ಬಗ್ಗೆ ಜನತೆಗೆ ತಿಳಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪಿಸುವುದಾಗಿ ನಂಬಿಸಿ ಫೈಬರ್ ಪ್ರತಿಮೆ ಸ್ಥಾಪಿಸುವ ಮೂಲಕ ಜನತೆಗೆ ‘ನಂಬಿಕೆ ದ್ರೋಹ’ ಎಸಗಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾರ್ಕಳ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್‌ನ ಸಹಯೋಗದಲ್ಲಿ ಸೋಮವಾರ ಕಾರ್ಕಳ ತಾಲೂಕು ಬೈಲೂರಿನ ಉಮಿಕಲ್ ಬೆಟ್ಟದ ಬುಡದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಹಿಂದುತ್ವದ ಹೆಸರಿನಲ್ಲಿ ಅವರು ಮಾಡಿದ ಲೂಟಿ- ಭ್ರಷ್ಟಾಚಾರವನ್ನು ಬೆಳಕಿಗೆ ತರುವ ಕೆಲಸವನ್ನು ನಾವು ಮಾಡುತಿದ್ದೇವೆ. ಬ್ರಹ್ಮಾವರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ಬಿಜೆಪಿ ನಾಯಕನ ನೇತೃತ್ವದ ಆಡಳಿತ ಮಂಡಳಿ 15 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆಸಿದರೆ, ಇಲ್ಲಿ ಉಮಿಕಲ್ ಬೆಟ್ಟದ ತುದಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮನ ಕಂಚಿನ ಮೂರ್ತಿ ಸ್ಥಾಪನೆ ಹೆಸರಿನಲ್ಲಿ ಶಾಸಕರು ಮಾಡಿ ಮಹಾವಂಚನೆಯನ್ನು ಜನತೆಗೆ ಮುಟ್ಟಿಸುವ ಕಾರ್ಯ ಮಾಡುತಿದ್ದೇವೆ ಎಂದು ಸೊರಕೆ ಹೇಳಿದರು.
ಶಾಸಕರು ಚುನಾವಣೆ ಗೆಲ್ಲಲು ಮತದಾರರ ಧಾರ್ಮಿಕ ಭಾವನೆ, ಭಕ್ತಿ, ನಂಬಿಕೆಗೆ ಧಕ್ಕೆ ತರುವ ಕೆಲ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಕಲಿ ಪ್ರತಿಮೆ ಸ್ಥಾಪಿಸಲಾಗಿದೆ. ಈ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಧರ್ಮ, ನಂಬಿಕೆಯನ್ನು ಘಾಸಿಗೊಳಿಸಿದ ಅಧಿಕಾರಿಗಳ ವಿರುದ್ಧ ಸಹ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ ಸೊರಕೆ, ಈ ಯೋಜನೆಯಲ್ಲಿ ಅವ್ಯವಹಾರ ನಡೆಸಲು ಸಾಥ್ ನೀಡಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕಾಂಗ್ರೆಸ್ ಮುಖಂಡ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳ್ಳಿ, ಪರಶುರಾಮನ ನಕಲಿ ಮೂರ್ತಿ ಪ್ರತಿಷ್ಠಾಪಿ ಸುವ ಮೂಲಕ ಕಾರ್ಕಳದ ಶಾಸಕರು ಸಾವಿರಾರು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.
ಕ್ರಿಮಿನಲ್ ಅಪರಾಧ: ತಾಂತ್ರಿಕ ಅನುಮೋದನೆಯಿಲ್ಲದೇ ಏಕಾಎಕಿ ಪ್ರತಿಮೆ ಎತ್ತಂಗಡಿ ಮಾಡಿರುವುದು ಕ್ರಿಮಿನಲ್ ಅಪರಾಧವಾಗುತ್ತದೆ. ಮಾತ್ರವಲ್ಲದೇ ಕಾನೂನಿನ ವಿರೋಧಿಗಳು, ಸಂವಿಧಾನದ ವಿರೋಧಿಗಳು ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳಾಗಿ ಆಯ್ಕೆಯಾಗಬಾರದು ಎಂದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿ ತರಾತುರಿಯ ಕಾಮಗಾರಿಯಲ್ಲ. ಇದು ವ್ಯವಸ್ಥಿತ ವಂಚನೆಯ ಭಾಗವಾಗಿದೆ. ಇದು ಜನರ ಕಣ್ಣಿಗೆ ಮಣ್ಣೆರಚಿ ನಡೆಸಿದ ವಂಚನೆ. ಇದು ಕಾರ್ಕಳಕ್ಕೆ ಕಪ್ಪುಚುಕ್ಕಿ ಎಂದ ರೈ, ಅಧರ್ಮದ ವಿರುದ್ದ ಹೋರಾಟವೇ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ, ನಕಲಿ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಸುನಿಲ್ ಕುಮಾರ್ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಪರಶುರಾಮ ಥೀಮ್ ಪಾರ್ಕಿನ ನಕಲಿ ಪ್ರತಿಮೆ ಕಾಮಗಾರಿ ಸ್ಥಗಿತವಾಗಬೇಕು ಅಲ್ಲದೇ ಈ ಮೂರ್ತಿಯ ನೈಜತೆಯ ಕುರಿತ ತನಿಖೆಗೆ ಸಮಿತಿ ರಚನೆಯಾಗಬೇಕು ಹಾಗೂ ತಾಂತ್ರಿಕ ಪರಿಣಿತರ ತಂಡವೇ ಈ ಮೂರ್ತಿಯ ಮರುಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿ, ನಾವು ಪರಶುರಾಮ ಪಾರ್ಕ್ ನಿರ್ಮಾಣದ ವಿರೋಧಿಗಳಲ್ಲ, ಆದರೆ ನಕಲಿ ಪ್ರತಿಮೆ ನಿರ್ಮಾಣ ಮಾಡಿ ಜನರ ಧಾರ್ಮಿಕ ನಂಬಿಕೆಗೆ ಅಪಚಾರ ಎಸಗಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಡಾ. ಅಂಶುಮನ್, ಕಾಂಗ್ರೆಸ್ ಮುಖಂಡರಾದ ವಿಕಾಸ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‌ರಾಜ್ ಕಾಂಚನ್, ಡಿ.ಆರ್ ರಾಜು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಚಂದ್ರಶೇಖರ ಬಾಯರಿ, ಸದಾಶಿವ ದೇವಾಡಿಗ, ದೀಪಕ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ನಾಯಕಿ ಅನಿತಾ ಡಿಸೋಜ ಮುಂತಾದ ವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಸ್ವಾಗತಿಸಿದರೆ, ಶುಭದ ರಾವ್ ಕಾರ್ಯಕ್ರಮ ನಿರೂಪಿಸಿದರು.