×
Ad

ಬೈಲೂರು: ಪರಶುರಾಮ ಪಾರ್ಕ್‌ಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ, ಪರಿಶೀಲನೆ

Update: 2023-09-23 20:18 IST

ಉಡುಪಿ, ಸೆ.23: ವಿವಾದವೊಂದರ ಕೇಂದ್ರಬಿಂದುವಾಗಿ, ಅಕ್ರಮ ಹಾಗೂ ಅವ್ಯವಹಾರದ ಆರೋಪ ದಟ್ಟವಾಗಿ ಕೇಳಿ ಬರುತ್ತಿರುವ ಕಾರ್ಕಳ ತಾಲೂಕು ಬೈಲೂರಿನ ಎರ್ಲಪಾಡಿ ಗ್ರಾಪಂ ವ್ಯಾಪ್ತಿಯ ಉಮಿಕ್ಕಲ್‌ಬೆಟ್ಟದಲ್ಲಿ 14.42 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್‌ಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಥೀಮ್ ಪಾರ್ಕ್‌ನಲ್ಲಿ ಈಗಾಗಲೇ 33 ಅಡಿ ಎತ್ತರದ 15 ಟನ್ ಭಾರದ ಕಂಚಿನ ಪರಶುರಾಮ ಮೂರ್ತಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಆದರೆ ಈ ಮೂರ್ತಿಯ ಗುಣಮಟ್ಟ, ಅದರ ಸಾಚಾತನದ, ಮೂರ್ತಿ ತಯಾರಿಕೆಗೆ ಬಳಸಿರುವ ಲೋಹದ ಕುರಿತಂತೆ ಸಾರ್ವಜನಿಕರಿಂದ ತೀವ್ರವಾದ ಆಕ್ಷೇಪಗಳು ಕೇಳಿಬಂದಿದ್ದು, ದೂರುಗಳನ್ನು ಸಹ ಸರಕಾರಕ್ಕೆ ಸಲ್ಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಚಿವರು ಇಂದು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾಡಳಿತ, ನಿರ್ಮಿತಿ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ದೂರುಗಳಿಗೆ ಹಾಗೂ ಆರೋಪಗಳಿಗೆ ಸಂಬಂಧಿಸಿದಂತೆ ಸರಕಾರ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಈ ಸ್ಥಳವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಂಬಂಧಿತರಿಗೆ ಸೂಚನೆಗಳನ್ನು ನೀಡಿದರು.

ಪರಶುರಾಮ ಥೀಮ್‌ಪಾರ್ಕ್‌ಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಹಾಗೂ ಕೆಲವೊಂದು ವಿಚಾರಗಳು ನನ್ನ ಗಮನಕ್ಕೆ ಬಂದಿದ್ದರಿಂದ ಜನರ ಒತ್ತಾಯದ ಮೇರೆಗೆ ನಾನಿಂದು ಇಲ್ಲಿಗೆ ಖುದ್ಧಾಗಿ ಭೇಟಿ ನೀಡಿದ್ದೇವೆ. ಎಲ್ಲವನ್ನೂ ನಾನು ಸ್ವತಹ ನೋಡಿದ್ದೇನೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಇಲ್ಲಿಯೇ ಪ್ರತ್ಯೇಕವಾಗಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ನಾನು ಯಾರ ಮೇಲೂ ಆರೋಪ ಮಾಡಲು ಇಲ್ಲಿಗೆ ಬಂದಿಲ್ಲ. ಆದರೆ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಿ, ಅವರನ್ನು ದಿಕ್ಕು ತಪ್ಪಿಸುವ ಪ್ರಯತ್ನವಂತೂ ಇಲ್ಲಿ ಆಗಿರುವುದು ಕಂಡುಬರುತ್ತದೆ. ಮೂರ್ತಿಯ ವಿಷಯದಲ್ಲಿ ನಿಜವಾಗಿಯೂ ಏನಾಗಿದೆ ಎಂಬುದನ್ನು ಅಧಿಕಾರಿಗಳ ಮೂಲಕ ಹಾಗೂ ಮೂರ್ತಿ ಮಾಡಿದ ಶಿಲ್ಪಕಾರರನ್ನು ಕರೆಸಿ ಮಾತಾಡುವ ಮೂಲಕ ತಿಳಿದುಕೊಳ್ಳುತ್ತೇನೆ ಎಂದರು.

ಯೋಜನೆ ಒಳ್ಳೆಯದಿದೆ. ಆದರೆ ಅದನ್ನು ಅನುಷ್ಠಾನಗೊಳಿಸಿದ ರೀತಿ, ಚುನಾವಣೆಯಲ್ಲಿ ಅದರ ಲಾಭ ಪಡೆಯಲು ಮಾಡಿದ ಪ್ರಯತ್ನ, ಜನರ ಭಾವನೆಗಳೊಂದಿಗೆ ಆಡಿದ ರೀತಿ ಸರಿಯಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು.

ಸಚಿವರು ಸ್ಥಳಕ್ಕೆ ಭೇಟಿ ನೀಡುವ ಸುದ್ದಿ ತಿಳಿದ ನೂರಾರು ಮಂದಿ ಸಾರ್ವಜನಿಕರು ಸ್ಥಳದಲ್ಲಿ ನೆರೆದಿದ್ದು, ಪ್ರತಿಷ್ಠಾಪನೆ ಗೊಂಡಿರುವ ಮೂರ್ತಿಯ ಕುರಿತಂತೆ ಬಲವಾದ ಸಂಶಯ ವ್ಯಕ್ತಪಡಿಸಿದರು. ಈಗ ಇಲ್ಲಿರುವುದು ನಕಲಿ ಮೂರ್ತಿಯಾ ಗಿದ್ದು, ಪರಶುರಾಮನ ಮೂರ್ತಿ ಸ್ಥಾಪನೆಯ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಗೊಳಿಸಲಾಗಿದೆ ಎಂದು ಜನರು ಜೋರಾದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

1.5 ಎಕರೆ ಗೋಮಾಳ ಪ್ರದೇಶದಲ್ಲಿ ಈ ಥೀಮ್‌ಪಾರ್ಕ್ ತಲೆ ಎತ್ತಿದ್ದು, ಯೋಜನೆಗೆ ಜಾಗ ಇನ್ನೂ ಮಂಜೂರಾ ಗಿಲ್ಲ.ಈಗಾಗಲೇ ಸರಕಾರ, ಜಿಲ್ಲಾಡಳಿತ, ಕಾರ್ಕಳ ತಹಶೀಲ್ದಾರ್ ಎಲ್ಲರೂ ಈ ಜಮೀನನ್ನು ಯೋಜನೆಗೆ ನೀಡಿರುವ ಪ್ರಸ್ತಾಪ ತಿರಸ್ಕರಿಸಿದ್ದಾರೆ. ಹೀಗಾಗಿ ಇಡೀ ಯೋಜನೆಯೇ ಅಕ್ರಮ ಎಂದು ಸ್ಥಳದಲ್ಲಿ ನೆರೆದ ಸಾರ್ವಜನಿಕರು ಸಚಿವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಶುಭದ ರಾವ್, ಎಡಿಸಿ ಮಮತಾದೇವಿ, ಕನ್ನಡ ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News