ಆದರ್ಶ ಸಮಾಜ ಕಟ್ಟುವುದು ಶಿಕ್ಷಕರ ಜವಾಬ್ದಾರಿ: ಸಯ್ಯದ್ ಬ್ಯಾರಿ
ಕುಂದಾಪುರ: ಶಿಕ್ಷಕರಿಗೆ ಆದರ್ಶ ಸಮಾಜವನ್ನು ಕಟ್ಟುವ ಜವಾಬ್ದಾರಿಯುತ ಕರ್ತವ್ಯವಿದೆ. ಬೋಧನೆ ಎನ್ನುವುದು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರಬಾರದು. ಅದರೊಂದಿಗೆ ಪಠ್ಯೇತರ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಅನುಭವ ಮತ್ತು ಜೀವನದ ಅನುಭವ ಕೂಡ ಅಳವಡಿಸಿಕೊಂಡು ಬೋಧಿಸಿದರೆ ಅದು ಪರಿಣಾಮಕಾರಿಯಾಗುತ್ತದೆ ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದ್ದಾರೆ.
ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಲಾದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಲ್ಲಿ ತರಬೇತಿ ಪಡೆಯುತ್ತಿರುವ ನೂರು ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ನಂತರದಲ್ಲಿ ಕನಿಷ್ಠ ಓರ್ವ ಶಿಕ್ಷಕ ಒಂದು ವರ್ಷದಲ್ಲಿ ನಲವತ್ತು ವಿದ್ಯಾರ್ಥಿಗಳಿಗೆ ಬೋಧಿಸಿದರೆ ನೂರು ಶಿಕ್ಷಕರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೋಧಿಸಿ ಬದುಕನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದರು.
ನಾವು ಎನ್ನುವುದು ವಿಶಾಲವಾದ ಅರ್ಥವನ್ನು ಸೂಚಿಸುತ್ತದೆ. ನಾನು ಎನ್ನುವುದರಿಂದ ಅಹಂ ಮತ್ತು ಅಹಂಕಾರ ಹುಟ್ಟುತ್ತದೆ. ಮಾನವ ಹುಟ್ಟುವಾಗ ಏನನ್ನೂ ತರುವುದಿಲ್ಲ ಹೋಗುವಾಗ ಏನನ್ನೂ ಕೊಂಡೊಯ್ಯಲಾರ. ಹುಟ್ಟು ಮತ್ತು ಸಾವಿನ ನಡುವೆ ಇರುವುದೇ ಜೀವನ. ಇಂತಹ ಜೀವನವನ್ನು ಜನ ಮೆಚ್ಚುವಂತೆ ಆದರ್ಶ ಮತ್ತು ಉನ್ನತವಾಗಿ ಸಾಗಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಒಂದು ನಾಣ್ಯದಲ್ಲಿ ಎರಡು ಮುಖಗಳು ಇರುವಂತೆ ಒಂದು ಮುಖ ಯಶಸ್ಸನ್ನು ತಿಳಿಸಿದರೆ ಇನ್ನೊಂದು ಮುಖ ತ್ಯಾಗವನ್ನು ಅರ್ಥೈಸುತ್ತದೆ. ಇವೆರಡನ್ನು ಶಿಕ್ಷಕರಾದವರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ. ಶೈಕ್ಷಣಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆಯುವಂತೆ, ಜೀವನ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಸಾಧಿಸುವುದೇ ವಿದ್ಯಾರ್ಜನೆಯ ಗುರಿಯಾಗಿರಬೇಕು ಎಂದರು.
ಮಾತೃಭಾಷೆಯನ್ನು ಅದಮ್ಯವಾಗಿ ಪ್ರೀತಿಸಬೇಕು ಅದರೊಂದಿಗೆ ಇತರ ಭಾಷೆಯನ್ನು ಗೌರವಿಸಬೇಕು. ಜೊತೆಗೆ ಇಂದಿನ ಆಧುನಿಕ ಜಗತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲಿಷ್ ಭಾಷಾ ಕಲಿಕೆ ಕೂಡ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಸಹಪ್ರಾಧ್ಯಪಕರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳು ಪ್ರಶ್ನೋತ್ತರಗಳ ಮೂಲಕ ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.