ವಸತಿ ಸಮುಚ್ಚಯದ ಫಲಾನುಭವಿಗಳಿಗೆ ಶೀಘ್ರವೇ ಮನೆ ಹಸ್ತಾಂತರಿಸಲು ಸೂಚನೆ
ಉಡುಪಿ, ಸೆ.2: ಹೆರ್ಗ ಗ್ರಾಮದ ಸರಳಬೆಟ್ಟುವಿನಲ್ಲಿ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ವಸತಿ ಸಮುಚ್ಚಯದ ಫಲಾನುಭವಿಗಳಿಗೆ ಅತೀ ಶೀಘ್ರದಲ್ಲಿ ಮನೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ನಗರಸಭೆ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಕೂಡಲೇ ಮನೆ ಕಾಮಗಾರಿಗೆ ಪೂರಕ ಅನುದಾನ ಬಿಡುಗಡೆಗೊಳಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆ ನಗರಸಭೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಶೀಘ್ರದಲ್ಲೇ ಬೆಂಗಳೂರಿನಲ್ಲಿ ವಸತಿ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಕೃಷ್ಣ ಜನ್ಮಷ್ಟಮಿ, ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿಯ ಕಳೆ ತೆಗೆಯಲು, ಸ್ವಚ್ಚತೆ ಹಾಗೂ ಗಣೇಶ ವಿಸರ್ಜನೆ ಮೆರವಣಿಗೆ ಹಾದಿಯ ರಸ್ತೆಗಳ ದುರಸ್ಥಿ, ತ್ಯಾಜ್ಯ ವಿಲೇವಾರಿ, ಅನಧಿಕೃತ ಜಾಹೀರಾತು ಫಲಕ ತೆರವು, ಇಂಡಸ್ಟ್ರಿಯಲ್ ಪ್ರದೇಶದ ರಸ್ತೆ ಕಾಮಗಾರಿ, ನಗರಸಭಾ ವ್ಯಾಪ್ತಿಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಿರಂತರ ಫಾಗಿಂಗ್ ನಡೆಸುವಂತೆ ಶಾಸಕರು ತಿಳಿಸಿದರು.
ಸಮರ್ಪಕ ದಾರಿದೀಪ ನಿರ್ವಹಣೆ, ಟೆಂಡರ್ ವಹಿಸಿ ಬಾಕಿ ಇರುವ ಕಾಮಗಾರಿಗಳ ಅನುಷ್ಠಾನ, ಬೀದಿ ನಾಯಿ ಸಮಸ್ಯೆ, ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸುವ ಬಗ್ಗೆ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ಜನಜಾಗೃತಿ ಮೂಡಿಸುವಂತೆ ಅವರು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ರಾಯಪ್ಪ, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.