×
Ad

ಬಿಜೆಪಿ ಸರಕಾರ ದೇಶದ ಅಭಿವೃದ್ದಿಗೆ ರಿವರ್ಸ್ ಗೇರ್ ಹಾಕಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ

Update: 2026-01-26 20:43 IST

ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ : ಬಿಜೆಪಿಯವರಿಗೆ ಈ ದೇಶವನ್ನು ಮುನ್ನಡೆಸುವ ಶಕ್ತಿಯೂ ಇಲ್ಲ, ಆಸಕ್ತಿಯೂ ಇಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಗಳನ್ನೆಲ್ಲ ಸಾಯಿಸುವ ಮೂಲಕ ಮತ್ತೆ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಈ ಆರೋಪ ಮಾಡಿರುವ ಸಚಿವರು, ಗ್ರಾಮಪಂಚಾಯತ್‌ ವ್ಯವಸ್ಥೆ ಬಲ ಪಡಿಸುವ ಉದ್ದೇಶದಿಂದ ನಾವು ಮಾಡಿದ ವಿಕೇಂದ್ರೀಕರಣ ವ್ಯವಸ್ಥೆಯನ್ನು ಅವರು ಕೇಂದ್ರೀಕರಣದತ್ತ ತಿರುಗಿಸುತ್ತಿದ್ದಾರೆ. ನರೇಗಾ ಯೋಜನೆಯನ್ನು ಕುಲಗೆಡಿಸಿ, ಕೇವಲ ಯೋಜನೆಯ ಹೆಸರಿನಲ್ಲಿ ರಾಮನ ಹೆಸರು ಸೇರಿಸಿ ಜನರನ್ನು ಭಾವನಾತ್ಮಕವಾಗಿ ಆಟವಾಡಿಸಬಹುದು ಎಂದುಕೊಂಡಿದ್ದಾರೆ. ತನ್ಮೂಲಕ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ನಾವು ಜನರನ್ನು ಮೌಢ್ಯದಿಂದ ಹೊರತಂದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದರೆ, ಅವರು ಕೇವಲ ಓಟಿಗೋಸ್ಕರ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.

ನರೇಗಾ ಯೋಜನೆಯಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿ, ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬಹುದಿತ್ತು. ಅದರ ಬದಲು ಇಂತಹ ಜನಪರ, ಜನಪ್ರಿಯ ಯೋಜನೆಯನ್ನೆ ಮುಗಿಸಲು ಹೊರಟಿದ್ದಾರೆ. ಅಂದರೆ, ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಬದಲು ರೋಗಿಯನ್ನೇ ಸಾಯಿಸಲು ಹೊರಟಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಯೋಜನೆಯಲ್ಲಿ ಭ್ರಷ್ಟಾಚಾರ ಇದ್ದಿದ್ದರೆ ಸರಿಪಡಿಸಲು ಕೇಂದ್ರ ಸರಕಾರಕ್ಕೆ 12 ವರ್ಷ ಅವಕಾಶವಿತ್ತಲ್ಲವೇ? ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದರೂ ಯೋಜನೆಯಲ್ಲಿ ಯಾವೊಂದು ಬದಲಾವಣೆ, ಸುಧಾರಣೆ ಮಾಡದೆ, ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಒಂದು ವ್ಯವಸ್ಥೆಯನ್ನೇ ನೇಣಿಗೆ ಹಾಕಲು ಹೊರಟಿದ್ದಾರೆ. ಅಂದರೆ ಇಷ್ಟು ವರ್ಷ ಅವರು ಭ್ರಷ್ಟಾಚಾರದ ಭಾಗವಾಗಿದ್ದರೆ? ಎಂದು ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ದೇಶದ ಸುಮಾರು 12 ಕೋಟಿಗೂ ಅಧಿಕ ಬಡಜನರು, ಕಾರ್ಮಿಕರು, 6 ಕೋಟಿಗೂ ಅಧಿಕ ಮಹಿಳಾ ಕಾರ್ಮಿಕರು, 3 ಕೋಟಿಗೂ ಅಧಿಕ ಪರಿಶಿಷ್ಟ ಜಾತಿ, ವರ್ಗದ ಜನರು ತಮ್ಮ ಜೀವನೋಪಾಯಕ್ಕಾಗಿ ಕಳೆದ 20 ವರ್ಷಗಳಿಂದ ಯಾವ ಯೋಜನೆಯ ಮೇಲೆ ಅವಲಂಬಿತರಾಗಿದ್ದಾರೋ ಆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಬಡವರು ಬಡವರಾಗಿಯೇ ಇರಬೇಕು, ಅವರು ಜೀತದ ಆಳಾಗಿಯೇ ಇರಬೇಕು, ಮಹಿಳೆಯರು ಸಬಲೀಕರಣಗೊಳ್ಳಬಾರದು, ಅವರು ಸಮಾಜದ ಮುಖ್ಯ ವಾಹಿನಿಗೆ ಬರಬಾರದು ಎನ್ನುವ ಮನೋಸ್ಥಿತಿ ಬಿಜೆಪಿಯವರದ್ದು ಎಂದು ಅವರು ತಿಳಿಸಿದ್ದಾರೆ.

ಸೋನಿಯಾಗಾಂಧಿ ಅವರ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಸರಕಾರ 20 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾವನ್ನು ನಾಶ ಮಾಡಲು ಹೊರಟಿರುವುದು ದೊಡ್ಡ ಆಘಾತವಾಗಿದೆ. ಮನರೇಗಾ ಉಳಿಸಬೇಕೆಂದು ಮಂಗಳವಾರ ಕಾಂಗ್ರೆಸ್ ಪಕ್ಷ ರಾಜಭವನ ಚಲೋ ನಡೆಸಲಿದೆ. ಪ್ರತಿ ತಾಲೂಕಿನಲ್ಲೂ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಪಂಚಾಯತ್‌ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೆಬ್ಬಾಳ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News