ಬ್ರಹ್ಮಾವರ: ಬಡ್ಡಿ ವ್ಯವಹಾರ-ಸಾಲ ವಸೂಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ; ಮೂವರು ಆರೋಪಿಗಳ ಬಂಧನ
ಸಂದೀಪ್ ಶೆಟ್ಟಿ, ವಿಜೆತ್ ಶೆಟ್ಟಿ, ಸಂಪತ್
ಉಡುಪಿ, ಆ.13: ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ, ಸಾಲದ ಕಂತಿನ ಹಣ ಬಾಕಿ ಉಳಿದ ಸಂದರ್ಭ ಸಾರ್ವಜನಿಕ ರಿಗೆ ಕಿರುಕುಳ ನೀಡಿದ ಆರೋಪದಡಿ ಮಂಗಳೂರಿನ ಸಾನಿಧ್ಯ ಫೈನಾನ್ಸ್‌ನ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಪರಿಸರದಲ್ಲಿ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಸಾಲದ ಕಂತಿನ ಹಣ ಬಾಕಿ ಇದ್ದ ಸಂದರ್ಭದಲ್ಲಿ ಹಣಕ್ಕಾಗಿ ಸಾರ್ವಜನಿಕರನ್ನು ಪೀಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕುಂಜಾಲಿನ ಗಣೇಶ್ ಗಾಣಿಗ ಎಂಬವರ ಮೋಟಾರು ಸೈಕಲ್‌ನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಲ್ಲದೇ, ಜಾಮೀನುದಾರ ರಾಜೇಶ್ ನಾಯ್ಕ ಅವರಿಗೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ರಾಜೇಶ್ ನಾಯ್ಕ ನೀಡಿದ ದೂರಿನಂತೆ ಸಾಲಕ್ಕೆ ಅಧಿಕ ಬಡ್ಡಿ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ-2004ರ ಕಲಂ 3 ಮತ್ತು 4ರ ಅಡಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಸಂದೀಪ್ ಶೆಟ್ಟಿ (ಕುಳಾಯಿ, ಮಂಗಳೂರು) ಹಾಗೂ ವಿಜೀತ್ ಶೆಟ್ಟಿ (ಕಾವೂರು, ಮಂಗಳೂರು) ಇವರನ್ನು ಆ.6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಮತ್ತೊಬ್ಬ ಆರೋಪಿ ಸಂಪತ್ (ಮಳವೂರು, ಮಂಗಳೂರು) ಎಂಬಾತನನ್ನು ಆ.13ರಂದು ಬಂಧಿಸಲಾಗಿದೆ.
ಆರೋಪಿಗಳು ಬಲವಂತವಾಗಿ ತೆಗೆದುಕೊಂಡು ಹೋಗಿದ್ದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದಾರೆ. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಿರಣ್ ಮತ್ತು ಸಿದ್ದಪ್ಪ ಸಕೆನಳ್ಳಿ ಕಾರ್ಯಾಚರಣೆ ನಡೆಸಿದ್ದಾರೆ.