ಉಡುಪಿ: ತುಳುಕೂಟದಿಂದ ಆರ್ಟಿದ ತಿರ್ಲ್-2026

Update: 2026-08-13 20:53 IST

ಉಡುಪಿ, ಆ.13: ಉಡುಪಿ ತುಳುಕೂಟದ ವತಿಯಿಂದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಗುರುವಾರ ನಡೆದ ‘ಆಟಿದ ತಿರ್ಲ್-2026’ ಕಾರ್ಯಕ್ರಮದಲ್ಲಿ ತುಳುನಾಡ ಸಂಸ್ಕೃತಿಯ ತಿಂಡಿ ತಿನಿಸುಗಳ ಘಮ ಮನಸ್ಸು ಅರಳಿಸಿತು.

ಬಾಳೆ ಎಲೆಯಲ್ಲಿ ಮಹಿಳೆಯರು ಮನೆಯಿಂದ ಮಾಡಿದ ಪದಾರ್ಥಗಳನ್ನು ಬಡಿಸಿದ ಬಳಿಕ ಹಿರಿಯರನ್ನು ಸ್ಮರಿಸಿ ತುಳುನಾಡ ಸಂಕಷ್ಟ ದೂರ ಮಾಡು, ಮಾರಿ ಓಡಿಸಿ ಊರಿಗೆ ಆಶೀರ್ವಾದ ಮಾಡುವಂತೆ ಪ್ರಾರ್ಥಿಸಲಾಯಿತು.

ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಭಾಷೆ, ಸಂಸ್ಕೃತಿ, ಭಾಷೆ ಉಳಿಸೋಣ. ತಾಯಿ, ಮಣ್ಣಿನ ಋಣ ಮರೆಯದಿರೋಣ ಎಂದು ಹೇಳಿದರು.

ನಿವೃತ್ತ ಪ್ರಿನ್ಸಿಪಾಲ್ ಡಾ.ವಿ.ಕೆ.ಯಾದವ್ ಮಾತನಾಡಿ, ಆಟಿ ತಿಂಗಳಲ್ಲಿ ಪರಸ್ಪರ ಸಹಕಾರ ಮುಖ್ಯ. ನಾನೂ ಬದುಕಬೇಕು, ಅನ್ಯರೂ ಬದುಕಬೇಕು ಎನ್ನುವ ಮನೋಭಾವ ದೊಂದಿಗೆ ಹಂಚಿ ತಿನ್ನೋದು ಭಾರತೀಯ ಸಂಸ್ಕೃತಿಯ ಗುಣ, ಪಿತೃ ಆರಾಧನೆಗೆ ಮಹತ್ವವಿದೆ ಎಂದರು.

ಉದ್ಯಮಿ ಅಮೃತಾ ಪುರುಷೋತ್ತಮಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅಡುಗೆ ಕ್ಷೇತ್ರದ ಸಾಧಕಿ ಲೀಲಾವತಿ ಹಾಗೂ ಹೆರಿಗೆ, ಬಾಣಂತನ ಔಷಧಿ ಯಲ್ಲಿ ಪ್ರಖ್ಯಾತರಾದ ಪುಷ್ಪಾ ಎಂ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತುಳುಕೂಟದ ಭುವನ ಪ್ರಸಾದ್ ಹೆಗ್ಡೆ, ಶೋಭಾ ದಿವಾಕರ ಶೆಟ್ಟಿ, ಮನೋರಮಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಆಟಿದ ತೀರ್ಲ್ ಸಂಚಾಲಕಿ ವಂದನಾ ವಿಶ್ವನಾಥ್ ಸ್ವಾಗತಿಸಿದರು. ಯಶೋದಾ ಕೇಶವ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಸನಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News